ಪುತ್ರ ಕಾರ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಚಿದಂಬರಂ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ

Update: 2022-05-17 04:37 GMT
ಪಿ ಚಿದಂಬರಂ (File Photo: PTI)

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರಿಗೆ ಸೇರಿದ ಮನೆಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ. ದಿಲ್ಲಿ, ಮುಂಬೈ ಹಾಗೂ ತಮಿಳುನಾಡಿನ ಶಿವಗಂಗೈ ಮತ್ತು ಚೆನ್ನೈ ಇಲ್ಲಿನ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಚಿದಂಬರಂ ಅವರ ಪುತ್ರ, ಶಿವಗಂಗಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಏಳು ಕಡೆಗಳಲ್ಲಿ ದಾಳಿ ನಡೆದಿವೆ ಎಂದು ಮೂಲಗಳು ತಿಳಿಸಿವೆ. ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಾರ್ತಿ ಚಿದಂಬರಂ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ ಎಂದು ತಿಳಿದು ಬಂದಿದೆ. 2010-14 ನಡುವೆ ಪಂಜಾಬ್‍ನಲ್ಲಿ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಕಂಪೆನಿಯೊಂದಕ್ಕೆ ಪ್ರಾಜೆಕ್ಟ್ ವೀಸಾ ದೊರಕಿಸಿ ಕೊಡಲು ಕಾರ್ತಿ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆಂಬ ಆರೋಪ ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ.

ಕಾರ್ತಿ ಚಿದಂಬರಂ ಅವರು ಇನ್ನೂ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದು ಅವರ ತಂದೆ ವಿತ್ತ ಸಚಿವರಾಗಿದ್ದ ವೇಳೆ ಐಎನ್‍ಎಕ್ಸ್ ಮೀಡಿಯಾಗೆ ಫಾರಿನ್ ಇನ್ವೆಸ್ಟ್‍ಮೆಂಟ್ ಪ್ರಮೋಷನ್ ಬೋರ್ಡ್ ಅನುಮತಿ ದೊರಕಿಸಿ ಕೊಡಲು ರೂ. 305 ಕೋಟಿ ತನಕ ವಿದೇಶಿ ನಿಧಿಯನ್ನು ಪಡೆದಿದ್ದಾರೆನ್ನಲಾದ ಸಂಬಂಧದ ಪ್ರಕರಣವೂ ಸೇರಿದೆ. ಈ ಪ್ರಕರಣ ಸಂಬಂಧ ಸಿಬಿಐ ಮೇ 15, 2017ರಂದು ಪ್ರಕರಣ ದಾಖಲಿಸಿದ ನಂತರ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಫೆಬ್ರವರಿ 2018ರಲ್ಲಿ ಬಂಧಿಸಿದ್ದರೆ ಒಂದು ತಿಂಗಳ ನಂತರ ಅವರಿಗೆ ಜಾಮೀನು ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News