ಆರೆಸ್ಸೆಸ್‌ ಸ್ಥಾಪಕ ಹೆಡ್ಗೇವಾರ್‌ ಭಾಷಣವನ್ನು 10ನೇ ತರಗತಿಯ ಪಠ್ಯದಲ್ಲಿ ಅಳವಡಿಸಿದ ಕರ್ನಾಟಕ ಸರಕಾರ

Update: 2022-05-17 07:22 GMT
Photo: Wikipedia

ಬೆಂಗಳೂರು: ರಾಜ್ಯದಲ್ಲಿ ಹಲವಾರು ವಿವಾದಗಳ ನಡೆವೆ ಇದೀಗ 10ನೇ ತರಗತಿಯ ಪಾಠ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಕೇಶವ ಬಲರಾಮ್‌ ಹೆಡ್ಗೇವಾರ್‌ರ ಭಾಷಣವನ್ನು ಅಳವಡಿಸಲಾಗಿದ್ದು, ಸದ್ಯ ಇದು ನೂತನ ವಿವಾದವನ್ನು ಸೃಷ್ಟಿಸಿದೆ. ಹತ್ತನೇ ತರಗತಿಯ ಪಾಠಪುಸ್ತಕದಲ್ಲಿ "ನಿಜವಾದ ಆದರ್ಶ ಪುರುಶ ಯಾರಾಗಬೇಕು?" ಎಂಬ ತಲೆಬರಹದಲ್ಲಿ ಭಾಷಣವನ್ನು ಅಳವಡಿಸಲಾಗಿದೆ.

10ನೇ ತರಗತಿಯ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವುದನ್ನು ಆಲ್-ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‌ಒ) ಮತ್ತು ಆಲ್-ಇಂಡಿಯಾ ಸೇವ್ ಎಜುಕೇಶನ್ ಕಮಿಟಿ (ಎಐಎಸ್‌ಇಸಿ) ನಂತಹ ಸಂಘಟನೆಗಳು ವಿರೋಧಿಸಿವೆ.

ಹೆಡ್ಗೇವಾರ್ ಭಾಷಣವನ್ನು ಪಠ್ಯಕ್ರಮಕ್ಕೆ ಸೇರಿಸಿದ ಜೊತೆಗೆ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾಠವನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ. ಪಠ್ಯಪುಸ್ತಕಕ್ಕೆ ಇತರ ಸೇರ್ಪಡೆಗಳಲ್ಲಿ ವೇದ ವಿದ್ವಾಂಸ ದಿವಂಗತ ಬನ್ನಂಜೆ ಗೋವಿಂದಾಚಾರ್ಯ ಮತ್ತು ಶತಾವಧಾನಿ ಆರ್ ಗಣೇಶ್ ಅವರ “ಶ್ರೇಷ್ಠ ಭಾರತೀಯ ಚಿಂತನೆಗಳು” ಸೇರಿವೆ ಎಂದು Thehindu ವರದಿ ಮಾಡಿದೆ. ಇದನ್ನು ಖಂಡಿಸಿ ಎಐಎಸ್‌ಇಸಿ ಹೇಳಿಕೆ ನೀಡಿದ್ದು, ರಾಜ್ಯದ ಬಿಜೆಪಿ ಸರಕಾರ ಆರ್‌ಎಸ್‌ಎಸ್ ಮತ್ತು ಪಕ್ಷದ ಸಿದ್ಧಾಂತವನ್ನು ಪಠ್ಯಪುಸ್ತಕಗಳಲ್ಲಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಪಠ್ಯಪುಸ್ತಕದಲ್ಲಿ ಹೆಡ್ಗೇವಾರ್ ಅಥವಾ ಆರ್‌ಎಸ್‌ಎಸ್ ಬಗ್ಗೆ ಏನನ್ನೂ ಒಳಗೊಂಡಿಲ್ಲ, ಆದರೆ ಜನರಿಗೆ, ವಿಶೇಷವಾಗಿ ಯುವಕರಿಗೆ ಸ್ಪೂರ್ತಿಯಾಗಬೇಕು ಎಂಬ ಅವರ ಭಾಷಣ ಮಾತ್ರ ಇದೆ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭಾಷಣವನ್ನು ಸೇರಿಸಿರುವುದನ್ನು ಸಮರ್ಥಿಸಿಕೊಂಡರು.

"ಕೆಲವರು ಎಲ್ಲವನ್ನೂ ವಿರೋಧಿಸಲು ಬಯಸುತ್ತಾರೆ ಮತ್ತು ಅವರು ಹೇಳಿದ್ದನ್ನು ಮಾತ್ರ ಸತ್ಯವೆಂದು ಭಾವಿಸುತ್ತಾರೆ ಮತ್ತು ಅವರ ಆಲೋಚನೆಯನ್ನು ಮಾತ್ರ ಸಮಾಜಕ್ಕೆ ಹೇಳಬೇಕು ಎಂತಿರುತ್ತಾರೆ. ಆ ಭಾಷಣದಲ್ಲಿ, ಹೆಡ್ಗೆವಾರ್ ಅವರು ಸಿದ್ಧಾಂತ, ಮೌಲ್ಯಗಳು ಮತ್ತು ತತ್ವಗಳ ಬಗ್ಗೆ ಹೇಳಿದ್ದಾರೆ. ಅವರು ಸಮಾಜ ಮತ್ತು ರಾಷ್ಟ್ರದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ತಪ್ಪೇನು?" ಎಂದು ಸಮರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News