ಜೆಡಿಎಸ್‍ನಲ್ಲಿ ದುಡಿಮೆಗೆ ಬೆಲೆ ಇಲ್ಲ, ದುಡ್ಡಿದ್ದವರಿಗೆ ಮಾತ್ರ ಟಿಕೆಟ್: ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆರೋಪ

Update: 2022-05-17 14:33 GMT

ಮೈಸೂರು,ಮೇ.17:  ಜೆಡಿಎಸ್ ಪಕ್ಷದಲ್ಲಿ ದುಡಿಮೆಗೆ ಬೆಲೆ ಇಲ್ಲ. ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ದುಡ್ಡು ಮಾನದಂಡವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 35 ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ದುಡಿದ ಕಿಲಾರ ಜಯರಾಂ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಟಿಕೇಟ್ ನೀಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ`ಜಯರಾಂ ಚುನಾವಣೆ ಎದುರಿಸಲು ಹಣ ಬೇಕು ನಿಮ್ಮ ಬಳಿ ಹಣ ಇಲ್ಲ ಎಂದು ಎಚ್.ಕೆ.ರಾಮು ಅವರಿಗೆ ಟಿಕೇಟ್ ನೀಡಿದ್ದಾರೆ ಎಂದರು.

ಹಣ ಪಡೆದು ಟಿಕೇಟ್ ನೀಡಿದ್ದಾರೆ ಎಂದು ನಾನೆಲ್ಲೂ ಹೇಳಿಲ್ಲ. ಹಣ ಇದ್ದವರಿಗೆ ಟಿಕೇಟ್ ನೀಡಿದ್ದಾರೆ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಕುಮಾರಸ್ವಾಮಿ ಸಭೆ ಸಮಾರಂಭದಲ್ಲಿ ತಿರುಚಿ ಹೇಳುತ್ತಿರುವುದು ಸರಿಯಲ್ಲ. ಅವರೇ ಹೇಳಿದಂತೆ ಮಳವಳ್ಳಿ ಶಾಸಕ ಅನ್ನದಾನಿ ಬಳಿ ಹಣ ಇರಲಿಲ್ಲ ಟಿಕೇಟ್ ನೀಡಿದ್ದೇವೆ ಎಂದ ಮೇಲೆ ಹಣ ಇಲ್ಲದ ಕಿಲಾರ ಜಯರಾಂ ಅವರಿಗೆ ಟಿಕೇಟ್ ನೀಡಬಹುದಿತ್ತು. ಅವರು ಪಕ್ಷಕ್ಕೆ ದುಡಿದಿಲ್ಲವೇ? ಯಾವ ಮಾನದಂಡ ಉಪಯೋಗಿಸಿ ನೀವು ಎಚ್.ಕೆ.ರಾಮುಗೆ ಟಿಕೇಟ್ ನೀಡಿದ್ದೀರಿ? ಎಂದು ಪ್ರಶ್ನಿಸಿದರು. 

ಎಚ್.ಡಿ.ದೇವೇಗೌಡರು ಯಾವಾಗ ಕುಮಾರಸ್ವಾಮಿ ಹೆಗಲಿಗೆ ಪಕ್ಷದ ಜವಾಬ್ದಾರಿ ಕೊಟ್ಟರೋ ಅಂದಿನಿಂದಲೇ ಜೆಡಿಎಸ್ ಅವಸಾನದ ಹಾದಿ ಹಿಡಿದಿದೆ. ಎಚ್.ಡಿ.ಕುಮಾರಸ್ವಾಮಿ ಗೆ ಪಕ್ಷ ಕಟ್ಟುವ ಬದ್ಧತೆ, ಕಾಳಜಿ ಇಲ್ಲ. ಪಕ್ಷದಲ್ಲಿ ಆಂತರಿಕ ಸ್ವಾತಂತ್ರ್ಯವಿಲ್ಲ. ಸ್ವಾಭಿಮಾನಿಗಳು ಅಲ್ಲಿ ಉಳಿಯುವುದು ಕಷ್ಟ. ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಸೂಟ್‍ಕೇಸ್ ಇದ್ದವರಿಗೆ ಪಕ್ಷದಲ್ಲಿ ಮುಂದಿನ ಸ್ಥಾನ ಎಂದು ಹೇಳಿದ್ದನ್ನು ನೆನಪಿಸಿದ ಮರಿತಿಬ್ಬೇಗೌಡ, ನಾವೇನೂ ಆ ರೀತಿ ಹೇಳಿಲ್ಲ. ನಾನೂ ಕೂಡ ಪಕ್ಷಕ್ಕೆ ದುಡಿದಿದ್ದೇನೆ. ಬ್ಯಾನರ್ ಬಂಟ್ಟಿಗ್ಸ್ ಕಟ್ಟಿದ್ದೇನೆ, ಸಭೆ, ಸಮಾರಂಭ ಏರ್ಪಡಿಸಿದ್ದೇನೆ. ಪಕ್ಷದಲ್ಲಿ ದುಡಿದ ನನಗೇನೂ ನೀವು ಟಿಕೇಟ್ ಕರೆದು ಕೊಡಲಿಲ್ಲ. ಪಕ್ಷ ಬಿಟ್ಟಮೇಲೆ ಎಸ್.ಎಂ.ಕೃಷ್ಣ, ಜಿ.ಮಾದೇಗೌಡ ಮತ್ತು ಡಿ.ಕೆ.ಶಿವಕುಮಾರ್ ಆಶೀರ್ವಾದದಿಂದ ಕಾಂಗ್ರೆಸ್ ಟಿಕೇಟ್ ಪಡೆದು ಗೆದ್ದು ಬಂದೆ. ನಂತರವೂ ನೀವು ಟಿಕೇಟ್ ಕೊಡುವುದಾಗಿ ಹೇಳಿ ವಂಚಿಸಿದ್ದೀರಿ. ಪಕ್ಷೇತರನಾಗಿ ಗೆದ್ದು ಬಂದ ನಂತರ ನನ್ನ ಸಾಮಥ್ರ್ಯ ತಿಳಿದು ಮುಂದಿನ ಚುನಾವಣೆಯಲ್ಲಿ 3 ತಿಂಗಳ ಮೊದಲೇ ನನಗೆ ಟಿಕೇಟ್ ನೀಡಿದ್ದೀರಿ ಎನ್ನುವುದನ್ನು ನೀವು ನೆನಪಿಸಿಕೊಳ್ಳಿ ಎಂದರು.

2ಬಾರಿ ಜೆಡಿಎಸ್‍ನಿಂದ ಟಿಕೇಟ್ ಕೊಟ್ಟರೂ ನನ್ನ ಪರವಾಗಿ ಕ್ಷೇತ್ರದಲ್ಲಿ ಒಂದು ಬಾರಿಯೂ ಪ್ರಚಾರ ಮಾಡಲು ಬರಲಿಲ್ಲ. ಬದಲಾಗಿ ನನ್ನನ್ನು ಸೋಲಿಸಲು ಸಂಚು ರೂಪಿಸಲಾಯಿತು. ಆದರೂ ನನ್ನ ಪ್ರಾಮಾಣಿಕ ಕರ್ತವ್ಯ ನನ್ನನ್ನು ಗೆಲ್ಲಿಸಿತು ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಿಲಾರ ಜಯರಾಂ ಉಪಸ್ಥಿತರಿದ್ದರು.

ಇಲ್ಲಿಯ ತನಕ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರ ಕೆಟ್ಟಿರಲಿಲ್ಲ. ಈಗ ಕುಮಾರಸ್ವಾಮಿ ಅವುಗಳನ್ನೂ ಹಾಳು ಮಾಡಲು ಹೊರಟಿದ್ದಾರೆ. ಇಲ್ಲಿನ ಮತಗಳು ಮಾರಾಟವಾಗುತ್ತಿರಲಿಲ್ಲ. ಪ್ರಾಮಾಣಿಕರನ್ನು ಮತದಾರರು ಬೆಂಬಲಿಸುತ್ತಿದ್ದರು. ಈಗ ಎಚ್.ಕೆ.ರಾಮು ಅವರ  ಪ್ರವೇಶದಿಂದ ಈ ಕ್ಷೇತ್ರವೂ ಹಾಳಾಗುತ್ತಿದೆ.

 -ಮರಿತಿಬ್ಬೇಗೌಡ,   ವಿಧಾನಪರಿಷತ್ ಸದಸ್ಯ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News