ಶಾಲಾ ಅವರಣದಲ್ಲಿ ಶಸ್ತ್ರಾಸ್ತ್ರ ತರಬೇತಿ; ಕಠಿಣ ಕ್ರಮ ಕೈಗೊಳ್ಳಲು ಸಿಎಂ, ಸಿಎಸ್‍ಗೆ ಎನ್.ಹನುಮೇಗೌಡ ದೂರು

Update: 2022-05-17 16:32 GMT

ಬೆಂಗಳೂರು, ಮೇ 17: ‘ಪೊಲೀಸ್ ಇಲಾಖೆಯಿಂದ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಹೀಗಿರುವಾಗ ಶಾಲೆಯ ಆವರಣದಲ್ಲಿ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ಹಂಚಿಕೆ ಸಂವಿಧಾನದ ಆಶಯಗಳ ಉಲ್ಲಂಘನೆ ಮಾತ್ರವಲ್ಲ, ಕಾನೂನು ವಿರೋಧಿ ನಡವಳಿಯಾಗಿದೆ. ಇದು ತಾಲಿಬಾನ್ ಸಂಸ್ಕೃತಿ, ಶಾಂತಿ ಕದಡಿ, ಹಿಂಸೆಗೆ ಪ್ರಚೋದನೆ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ, ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.

‘ಶಿಕ್ಷಣ ಸಂಸ್ಥೆಗಳಲ್ಲಿ ಆವರಣಗಳಲ್ಲಿ ಏರ್ ಗನ್ ತರಬೇತಿ ಹಾಗೂ ಮೊಂಡು ತ್ರಿಶೂಲ ವಿತರಣೆಯನ್ನು ಸಮರ್ಥಿಸುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ನೈತಿಕ ಪೋಲಿಸ್‍ಗಿರಿ ಪ್ರಾರಂಭವಾದಂತೆ ಇದೆ. ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಲು ಪೊಲೀಸರ ಮೌನವೇ ಕಾರಣವಾಗಿದೆ. ಕಾನೂನು ಉಲ್ಲಂಘನೆ ಅಕ್ರಮವಲ್ಲ ಎನ್ನುವುದಾದರೆ ರಾಜ್ಯದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಲಿದೆ' ಎಂದು ಹನುಮೇಗೌಡ ಎಚ್ಚರಿಸಿದ್ದಾರೆ.

‘ಯಾವುದೇ ಕಾರಣಕ್ಕೂ ಗನ್ ತರಬೇತಿ, ತ್ರಿಶೂಲ ವಿತರಣೆಯಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಕಾನೂನು ಉಲ್ಲಂಘಿಸಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ತರಬೇತಿ ನೀಡಿದ ಸಂಘಟನೆಯ ಮುಖಂಡರು ಹಾಗೂ ಶಿಕ್ಷಣ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ನಿರ್ಭಿತಿಯ ವಾತಾವರಣ ಸೃಷ್ಟಿಸಲು ಕ್ರಮ ವಹಿಸಬೇಕು' ಎಂದು ಹನುಮೇಗೌಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News