ಪಠ್ಯದಿಂದ ಭಗತ್ ಸಿಂಗ್ ಹೊರಗೆ: ಕೇಜ್ರಿವಾಲ್ ಖಂಡನೆ

Update: 2022-05-17 17:27 GMT

ಬೆಂಗಳೂರು, ಮೇ 17: ಶಾಲಾ ಪಠ್ಯದಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಠ್ಯವನ್ನು ತೆಗೆಯುವ ರಾಜ್ಯ ಸರಕಾರದ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಭಗತ್ ಸಿಂಗ್ ಅವರನ್ನು ಬಿಜೆಪಿಯು ಇಷ್ಟೊಂದು ದ್ವೇಷಿಸುವುದಕ್ಕೆ ಕಾರಣವೇನು? ಪಠ್ಯಪುಸ್ತಕದಿಂದ ಅವರ ಪಠ್ಯವನ್ನು ತೆಗೆಯುವ ನಿರ್ಧಾರವು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನವಾಗಿದೆ. ದೇಶವು ಇದನ್ನು ಸಹಿಸುವುದಿಲ್ಲ. ಬಿಜೆಪಿ ಸರಕಾರವು ತನ್ನ ನಿರ್ಧಾರವನ್ನು ಹಿಂಪಡೆಯಲೇಬೇಕು ಎಂದು ಆಗ್ರಹಿಸಿದ್ದಾರೆ.

ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕರ್ನಾಟಕ ಸರಕಾರದ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಭಗತ್ ಸಿಂಗ್ ವಿರುದ್ಧದ ಬಿಜೆಪಿಯ ದ್ವೇಷ ಹೆಚ್ಚಾಗುತ್ತಿದೆ. ಕಡಿಮೆ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ವಿಚಾರಗಳು ಯುವಕರಲ್ಲಿ ದೇಶಭಕ್ತಿ ಹೆಚ್ಚಿಸುತ್ತದೆ. ಜನರಲ್ಲಿ ದೇಶಭಕ್ತಿ ಜಾಗೃತಗೊಳ್ಳುವುದರಿಂದ ಭಯಗೊಂಡು ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ವಿಶೇಷವಾಗಿ ಭಗತ್ ಸಿಂಗ್ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ʻದೇಶಭಕ್ತಿ ಪಠ್ಯಕ್ರಮʼ ಎಂಬ ವಿನೂತನ ಪಠ್ಯಕ್ರಮವನ್ನು ದೆಹಲಿಯ ಕೇಜ್ರಿವಾಲ್ ಸರಕಾರವು ಅಲ್ಲಿನ ಸರಕಾರಿ ಶಾಲೆಗಳಲ್ಲಿ ಜಾರಿಗೆ ತಂದಿದೆ. ದೆಹಲಿಯ ಎಲ್ಲ ಸರಕಾರಿ ಕಚೇರಿಗಳಲ್ಲಿ ಭಗತ್ ಸಿಂಗ್ ಫೋಟೋವನ್ನು ಕಡ್ಡಾಯಗೊಳಿಸಿದೆ. ಮಾರ್ಚ್‍ನಲ್ಲಿ ಪಂಜಾಬ್‍ನ ಮುಖ್ಯಮಂತ್ರಿ ಹುದ್ದೆಗೇರಿದ ಭಗವಂತ್ ಮಾನ್ ಅವರು ಭಗತ್ ಸಿಂಗ್ ತವರೂರಾದ ಖಟ್ಕರ್ ಕಲಾನ್ ಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಗತ್ ಸಿಂಗ್‍ರವರಿಗೆ ಗೌರವ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News