ಸರ್ಜರಿಗೊಳಗಾದ ಕಿರು ತೆರೆ ನಟಿ ಮೃತ್ಯು ಪ್ರಕರಣ: ಚಿತ್ರರಂಗದ ತಾರತಮ್ಯದ ವಿರುದ್ಧ ಕಿಡಿಕಾರಿದ ರಮ್ಯಾ

Update: 2022-05-17 17:52 GMT

ಬೆಂಗಳೂರು: ತಮ್ಮ ತೂಕ ಕಡಿಮೆಗೊಳಿಸುವ ಸಲುವಾಗಿ ದೇಹದ ಕೊಬ್ಬಿನಾಂಶ ತೆಗೆದು ಹಾಕುವ(ಫ್ಯಾಟ್) ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೇಳೆ ಕನ್ನಡದ ಯುವ ನಟಿ 21ರ ಹರೆಯದ ಚೇತನಾ ರಾಜ್‌ ಎಂಬವರು ಮೃತಪಟ್ಟಿದ್ದರು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸಂತಾಪದೊಂದಿಗೆ ಆಕ್ರೋಶವೂ ವ್ಯಕ್ತವಾಗಿದೆ. ಇದೀಗ ಈ ಕುರಿತು ಟ್ವಿಟರ್‌ ನಲ್ಲಿ ಚಿತ್ರರಂಗದ ವೈರುಧ್ಯಗಳ ಬಗ್ಗೆ ನಟಿ ರಮ್ಯಾ ಕಿಡಿಕಾರಿದ್ದಾರೆ.

'ಚಿತ್ರರಂಗವು ಹೆಣ್ಣು ಹೀಗೆಯೇ ಇರಬೇಕೆಂಬ ಸೌಂದರ್ಯ ಮಾನದಂಡವನ್ನಿಡುವ ಕಾರಣ ಇಂತಹಾ ಘಟನೆಗಳು ನಡೆಯುತ್ತವೆ ' ಎಂದು ಅವರು ಹೇಳಿದ್ದಾರೆ.

ಟ್ವೀಟ್‌ ಮಾಡಿದ ಅವರು, "ಪ್ಲಾಸ್ಟಿಕ್‌ ಸರ್ಜರಿ ನಡೆಸಿದ ನಂತರ ಮೃತಪಟ್ಟ ಯುವ ನಟಿಯ ಕುರಿತಾದ ಸುದ್ದಿಯನ್ನು ಓದಿ. ಚಿತ್ರರಂಗವು ಅವಾಸ್ತವಿಕವಾದ ಸೌಂದರ್ಯ ಮಾನದಂಡಗಳನ್ನು ಹೆಣ್ಣಿಗಾಗಿಯೇ ಸ್ಥಾಪಿಸುವ ಕಾರಣ, ಹೀಗೆಯೇ ಕಾಣಬೇಕು ಎಂಬ ಒತ್ತಡವೊಂದು ಮಹಿಳೆಯರ ಮೇಲೆ ಹೇರಲಾಗುತ್ತದೆ. 2018ರಲ್ಲಿ ನನ್ನ ಕಾಲಿನಲ್ಲಿ ಬೆಳೆದಿದ್ದ ಟ್ಯೂಮರ್‌ ಗಡ್ಡೆಯನ್ನು ತೆಗೆಯುವ ವೇಳೆ ಅತಿತೂಕದ ಕಾರಣದಿಂದ ನಾನು ತುಂಬಾ ಸಂಕಷ್ಟ ಎದುರಿಸಿದ್ದೆ. ಆಗ ನನ್ನ ʼತೂಕ ಇಳಿಕೆʼ ಸಂದರ್ಭದಲ್ಲಿ ನಾನು ತುಂಬಾ ಕಷ್ಟಪಟ್ಟಿದ್ದೆ. ನಾನು ಕೂಡಾ ತೂಕ ಇಳಿಸಿದ್ದೆ, ಆದರೆ ಅದಕ್ಕೆ ನನ್ನದೇ ಆದ ದಾರಿ ಮತ್ತು ವಿಧಾನವಿತ್ತು."

"ಸುಲಭವಾಗಿ ತೂಕ ಕಡಿಮೆ ಮಾಡುವ ಹಲವಾರು ವಿಧಾನಗಳು ಇವೆ. ಅದು ಶೀಘ್ರ ವಿಧಾನ ಮತ್ತು ಸುಲಭವಾಗಿ ಪ್ರಲೋಭನೆಗೊಳಗಾಗುತ್ತಾರೆ. ತನ್ನ ಜೀವ ಕಳೆದುಕೊಂಡ ಯುವತಿಯ ಬಗ್ಗೆ ನನಗೆ ಕನಿಕರವಿದೆ. ಆದರೆ, ಇದೇ ಸೌಂದರ್ಯ ಮಿತಿ ಪುರುಷರಿಗಿಲ್ಲ (ಯಾರಿಗೂ ಇರುವುದು ಬೇಡ) ಒಬ್ಬ ಹೀರೋ ಡೊಳ್ಳುಹೊಟ್ಟೆಯವನಾಗಿರಬಹುದು, ಕೂದಲಿಲ್ಲದೇ ಟೋಪಿ ಹಾಕಿಕೊಂಡು ನಡೆಯುವವನಾಗಿರಬಹುದು. ಆತನ ವಯಸ್ಸು 65 ಆದರೂ ಆತನನ್ನು ಹೀರೋ ಎಂದು ಪರಿಗಣಿಸಲಾಗುತ್ತದೆ. ಆದರೆ ಮಹಿಳೆಗೆ ಅದೇ ರೀತಿಯ ನಿಯಮವಿಲ್ಲ. ಆಕೆ ಒಂದಿಷ್ಟು ತೂಕ ಹೆಚ್ಚಿಸಿಕೊಂಡರೂ ಆಕೆಯನ್ನು ಆಂಟಿ, ಮುದುಕಿ, ಅಜ್ಜಿ ಎಂದೆಲ್ಲಾ ಗೇಲಿ ಮಾಡಲಾಗುತ್ತದೆ."

"ನೀವು ನೀವಾಗುವುದಲ್ಲದೇ ಬೇರೆ ಯಾವ ದಾರಿಯೂ ಇಲ್ಲ ಎನ್ನುವುದನ್ನು ಮಹಿಳೆಯರು ತಿಳಿದುಕೊಳ್ಳಬೇಕು. ನೀವು ಹೇಗಿರಬೇಕೆಂದು ಜಗತ್ತು ನಿರ್ಧರಿಸುವುದಕ್ಕೆ ನೀವು ಬಿಡಬೇಡಿ. ಮಹಿಳೆಯರ ಪಾತ್ರದ ಕುರಿತು ಚಿತ್ರರಂಗವು ಮತ್ತಷ್ಟು ಒಳಗೊಳ್ಳುವ ಅಗತ್ಯವಿದೆ. ಈಗ ನಿಯಮಗಳನ್ನು ಬದಲಾಯಿಸಬೇಕಾದ ಸಮಯವಾಗಿದೆ. ಈ ವೈರುಧ್ಯಗಳ ವಿರುದ್ಧ ಮಹಿಳೆಯರು ಮತ್ತು ಪುರುಷರು ಒಂದಾಗಿ ಹೋರಾಡಬೇಕು. ಅದು, ವೇತನದಲ್ಲಿನ ತಾರತಮ್ಯವಿರಬಹುದು, ಪಾತ್ರಗಳ ವಿಚಾರವಾಗಿರದು ಅಥವಾ ಸೌಂದರ್ಯ ಮಾನದಂಡಗಳ ಬಗ್ಗೆಯಾದರೂ ಸರಿ." ಎಂದು ರಮ್ಯಾ ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News