ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಇನ್ನಷ್ಟು ದುಬಾರಿ ಸಾಧ್ಯತೆ: ಕೃತಕ ಇಂಧನ ಬರ; ವರದಿ

Update: 2022-05-18 05:04 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ನ ಕೃತಕ ಅಭಾವ ಸೃಷ್ಟಿಯಾಗಿದ್ದು, ಇದು ಪ್ರತಿ ಲೀಟರ್ ದರವನ್ನು ರೂಪಾಯಿ 5ರಿಂದ 7ರವರೆಗೆ ಹೆಚ್ಚಿಸುವುದಕ್ಕೆ ವೇದಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್ ಇಂಧನದ ಮೇಲೆ 21 ರೂಪಾಯಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಮೂಲಗಳು ಖಚಿತಪಡಿಸಿವೆ ಎಂದು deccanherald.com ವರದಿ ಮಾಡಿದೆ.

ಕರ್ನಾಟಕ ಪ್ರತಿ ತಿಂಗಳು 9.30 ಲಕ್ಷ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಿದೆ. "ಬೆಂಗಳೂರಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಇದೆ. ಒಂದೆರಡು ದಿನಗಳಲ್ಲಿ ಇದರ ಪರಿಣಾಮ ಗೊತ್ತಾಗಲಿದೆ. ರಾಜ್ಯಕ್ಕೆ ಪ್ರಮುಖ ಪೂರೈಕೆದಾರರಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‍ನ ಪೂರೈಕೆ ಸ್ಥಿರವಾಗಿದ್ದರೂ, ಶೇಕಡ 40ರಷ್ಟು ಪೂರೈಕೆ ಮಾಡುವ ಬಿಪಿಸಿಎಲ್ ಮತ್ತು ಎಚ್‍ಪಿಸಿಎಲ್, ಬೇಡಿಕೆ ಈಡೇರಿಸಲು ಹೆಣಗಾಡುತ್ತಿವೆ. ಒಂದು ಖಾಸಗಿ ಕಂಪನಿ ಮುಂದಿನ ಎರಡು ದಿನಗಳಲ್ಲಿ ತೈಲ ಬೆಲೆಯನ್ನು ರೂ. 7ರಷ್ಟು ಹೆಚ್ಚಿಸಲಿದೆ" ಎಂದು ಡೀಲರ್ ಒಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

ಎರಡು ದೊಡ್ಡ ರಿಫೈನರಿಗಳು ತೀವ್ರ ನಷ್ಟದ ಕಾರಣದಿಂದಾಗಿ ಉತ್ಪಾದನೆ ಕಡಿತಗೊಳಿಸಿವೆ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್‍ಗಳ ಒಕ್ಕೂಟದ ಉಪಾಧ್ಯಕ್ಷ ಸನಾವುಲ್ಲಾ ಅನೀಸ್ ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‍ಗೆ 120 ಡಾಲರ್‍ಗೆ ಏರಿದ್ದು, ರಷ್ಯಾ ಇತ್ತೀಚೆಗೆ 30 ಡಾಲರ್‍ನಷ್ಟು ಕಡಿತಗೊಳಿಸಿದೆ. ಇದರಿಂದಾಗಿ ಬೆಲೆ ಇಳಿದಿದ್ದರೂ, ರಿಫೈನರಿಗಳು ಎರಡು, ಮೂರು ತಿಂಗಳ ಹಿಂದೆ ಬುಕ್ಕಿಂಗ್ ಮಾಡಿದ ತೈಲ ಪಡೆಯುತ್ತಿದ್ದಾರೆ. ಇದರಿಂದ ಬೆಲೆ ಅಧಿಕ ಎಂದು ಅವರು ವಿವರಿಸಿದ್ದಾರೆ.

ರಿಫೈನರಿಗಳು ಅಧಿಕ ಬೆಲೆಯಲ್ಲಿ ಪೂರೈಕೆ ಮಾಡುತ್ತಿರುವುದರಿಂದ ಮಾರುಕಟ್ಟೆ ಕಂಪನಿಗಳು 1000 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಪೂರೈಕೆ ಸ್ಥಿರಗೊಳಿಸಲು ಇರುವ ಮಾರ್ಗವೆಂದರೆ, ಈ ಹೊರೆಯನ್ನು ತಗ್ಗಿಸಲು ಬೆಲೆ ಏರಿಕೆ ಮಾಡುವುದು ಅಥವಾ ಸೀಮಾ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆ ಇಳಿಸುವುದು ಎಂದು ಹೇಳುತ್ತಾರೆ. ಎರಡು ಅತಿದೊಡ್ಡ ತೈಲ ಉತ್ಪಾದಕ ಕಂಪನಿಗಳಾದ ನಾಯರ ಎನರ್ಜಿ ಲಿಮಿಟೆಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಮ್ಮ ಉತ್ಪಾದನೆಯನ್ನು ಗಣನೀಯವಾಗಿ ಕಡಿತಗೊಳಿಸಿವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News