ಭದ್ರತೆ ʼಹೆಚ್ಚಿಸುವʼ ಸುಪ್ರೀಂ ತೀರ್ಪು: ಸ್ಥಳೀಯ ಗ್ರಾಮಸ್ಥರಿಗೆ ಹೊರೆಯಾಗುತ್ತಿರುವ ʼತಾಜ್‌ಮಹಲ್‌ʼ

Update: 2022-05-18 07:22 GMT

ಹೊಸದಿಲ್ಲಿ: ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್, ಸಾಮಾನ್ಯವಾಗಿ ಅದರ ಸಂಪೂರ್ಣ ಸೌಂದರ್ಯ ಮತ್ತು ವಾಸ್ತುಶಿಲ್ಪ ವಿಸ್ಮಯದಿಂದ ಜನರನ್ನು ಆಕರ್ಷಿಸುವ ಸ್ಮಾರಕವಾಗಿದೆ. ಆದರೆ, ಇದೀಗ ಆಗ್ರಾದ ಐದು ಹಳ್ಳಿಗಳ ನಿವಾಸಿಗಳಿಗೆ, ಈ ಪ್ರೀತಿಯ ಸ್ಮಾರಕದ ಪಾಲನೆಯು ದೊಡ್ಡ ಹೊರೆಯಾಗಿ ಪರಿಣಮಿಸಿದೆ ಎಂದು indiatoday.in ವರದಿ ಮಾಡಿದೆ.

ತಾಜ್‌ ಮಹಲ್‌ನ ಭದ್ರತೆಯನ್ನು 'ಹೆಚ್ಚಿಸುವ' ಸುಪ್ರೀಂ ಕೋರ್ಟ್‌ನ ತೀರ್ಪು ತಮ್ಮನ್ನು ತಮ್ಮ ಹಳ್ಳಿಗಳೊಳಗೆ ಕೂಡಿಹಾಕಿ ಬೀಗ ಜಡಿದಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ನಾಗ್ಲಾ ತಲ್ಪಿ, ಗರ್ಹಿ ವಂಗಸ್, ನಗ್ಲಾ ಪೈಮಾ, ಮುಹಲ್ಲಾ ಅಹ್ಮದ್ ಬುಖಾರಿ ಮತ್ತು ನಾಗ್ಲಾ ಧಿಂಗ್ ಎಂಬ ಐದು ಗ್ರಾಮಗಳ ಪ್ರತಿಯೊಬ್ಬ ನಿವಾಸಿಗೆ ಗ್ರಾಮದಿಂದ ಹೊರಹೋಗಲು ಮತ್ತು ಪ್ರವೇಶಿಸಲು ಪ್ರವೇಶ ಪಾಸ್ ನೀಡಲಾಗಿದೆ.

ಪಾಸ್ ಇಲ್ಲದವರಿಗೆ ಗ್ರಾಮಗಳಿಗೆ ಪ್ರವೇಶವಿಲ್ಲ. ಈ ಗ್ರಾಮಗಳನ್ನು ನಗರದ ಉಳಿದ ಭಾಗಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯು ತಾಜ್ ಮಹಲ್‌ಗೆ ಸಮೀಪದಲ್ಲಿ ಹಾದುಹೋಗುತ್ತದೆ ಮತ್ತು ಗ್ರಾಮದ ಖಾಯಂ ನಿವಾಸಿ ಎಂದು ಸಾಕ್ಷಿ ಸಮೇತ ಸಾಬೀತುಪಡಿಸದೆ ಯಾರೊಬ್ಬರೂ ಹಾದುಹೋಗದಂತೆ ಭದ್ರತಾ ಏಜೆನ್ಸಿಗಳು ರಸ್ತೆಯ ಮೇಲೆ ತಡೆಗಳನ್ನು ಹಾಕಿದ್ದಾರೆ ಎಂದು indiatoday ವರದಿಯಲ್ಲಿ ತಿಳಿಸಿದೆ.

ಸ್ಥಳೀಯ ಗ್ರಾಮಸ್ಥರಾದ ಭೂರಿ ಸಿಂಗ್ ಅವರು, "ತಮ್ಮ ಸಂಬಂಧಿಕರನ್ನು ಗ್ರಾಮದಲ್ಲಿ ಭೇಟಿ ಮಾಡಲು ಅನುಮತಿಸುತ್ತಿಲ್ಲ" ಎಂದು ಆರೋಪಿಸಿದ್ದಾರೆ. ಗ್ರಾಮದಲ್ಲಿ ಹಾಕಿರುವ ಬ್ಯಾರಿಕೇಡ್ ದಾಟಲು ಅನುಮತಿಸುವ ಮೊದಲು ಗ್ರಾಮಸ್ಥರು ಸ್ವತಃ ಭದ್ರತಾ ಬ್ಯಾರಿಕೇಡ್‌ ಬಳಿ ಹೋಗಿ ಭದ್ರತಾ ಸಿಬ್ಬಂದಿಗೆ ಸಂಬಂಧಿಕರ ಗುರುತನ್ನು ಪರಿಶೀಲಿಸಬೇಕು‌ ಎಂದೂ ಅವರು ಹೇಳುತ್ತಾರೆ.

"ಸುಮಾರು 25,000-30,000 ಜನಸಂಖ್ಯೆಯ ಪೈಕಿ, ಈ ​​ಹಳ್ಳಿಗಳಲ್ಲಿ ಸುಮಾರು 40 ಪ್ರತಿಶತದಷ್ಟು ಸ್ಥಳೀಯ ಪುರುಷರು ಅವಿವಾಹಿತರಾಗಿದ್ದಾರೆ. ಏಕೆಂದರೆ, ಯಾರೂ ತಮ್ಮ ಹೆಣ್ಣು ಮಕ್ಕಳನ್ನು ಈ ಹಳ್ಳಿಗಳ ಪುರುಷರೊಂದಿಗೆ ಮದುವೆ ಮಾಡಲು ಬಯಸುವುದಿಲ್ಲ" ಎಂದು ಭೂರಿ ಸಿಂಗ್‌ ಹೇಳಿದ್ದಾಗಿ ವರದಿ ತಿಳಿಸಿದೆ.

ಗ್ರಾಮಗಳಿಗೆ ಸಂಬಂಧಿಕರು ಅಪರೂಪವಾಗಿ ಭೇಟಿ ನೀಡುತ್ತಾರೆ ಮತ್ತು ಮದುವೆಯ ಆಮಂತ್ರಣಗಳನ್ನು ಸಹ ಫೋನ್ ಮೂಲಕವೇ ನೀಡಲಾಗುತ್ತದೆ ಎಂದು ಭೂರಿ ಸಿಂಗ್ ಹೇಳಿದರು.

ಸಾಮಾಜಿಕ ಕಾರ್ಯಕರ್ತ ಸಮೀರ್ ಮಾತನಾಡಿ, "ಈ ಗ್ರಾಮಗಳಲ್ಲಿ ಯಾರಾದರೂ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಆಂಬ್ಯುಲೆನ್ಸ್‌ಗೆ ಕರೆ ಮಾಡುವುದು ತುಂಬಾ ಕಷ್ಟದ ಕೆಲಸವಾಗಿದೆ. ಮುಖ್ಯರಸ್ತೆಯಿಂದ ರಾತ್ರಿ ವೇಳೆ ಯಾವುದೇ ವಾಹನಗಳನ್ನು ಗ್ರಾಮಗಳಿಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಮತ್ತು ಇನ್ನೊಂದು ಬದಿಯಿಂದ ಗ್ರಾಮಗಳಿಗೆ ತಲುಪಬೇಕಾದರೆ ಸುಮಾರು 10 ಕಿ.ಮೀ. ಸಂಚರಿಸಬೇಕಾಗುತ್ತದೆ.

"1992ರಿಂದ, ತಾಜ್ ಮಹಲ್ ನ ಭದ್ರತೆಯನ್ನು ಸುಪ್ರೀಂ ಕೋರ್ಟ್ ತನ್ನ ವ್ಯಾಪ್ತಿಗೆ ತೆಗೆದುಕೊಂಡಾಗ, ಬಹಳಷ್ಟು ಸ್ಥಳೀಯ ನಿವಾಸಿಗಳು ಈಗಾಗಲೇ ಈ ಗ್ರಾಮಗಳಿಂದ ವಲಸೆ ಹೋಗಿದ್ದಾರೆ. ಏಕೆಂದರೆ, ಅವರು ಇಲ್ಲಿ ಉಳಿಯುವುದರಿಂದ ಯಾವುದೇ ಭವಿಷ್ಯವಿಲ್ಲ ಎಂಬುವುದು ಅವರಿಗೆ ತಿಳಿದಿದೆ. ಅವರು ತಿಂಗಳುಗಟ್ಟಲೆ ತಮ್ಮ ಮನೆಗೆ ಭೇಟಿ ನೀಡುವುದಿಲ್ಲ. ಮೊದಲು ಈ ಗ್ರಾಮದಲ್ಲಿ ವಾಸಿಸುತ್ತಿದ್ದವರು ಗ್ರಾಮವನ್ನು ತೊರೆದ ನಂತರ, ಅವರು ತಮ್ಮ ಪ್ರವೇಶ ಪಾಸ್‌ಗಳನ್ನು ಮರಳಿ ಒಪ್ಪಿಸಬೇಕಾಯಿತು ಮತ್ತು ಈಗ ಅವರು ಭದ್ರತಾ ಏಜೆನ್ಸಿಗಳ ದೃಷ್ಟಿಯಲ್ಲಿ 'ಹೊರಗಿನವರಾಗಿದ್ದಾರೆ' ಎಂದು ಭೂರಿ ಸಿಂಗ್ ಇಂಡಿಯಾ ಟುಡೇಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News