ದಿಲ್ಲಿ: ಕಟ್ಟಡ ಧ್ವಂಸ ಕಾರ್ಯಾಚರಣೆ ವಿರೋಧಿಸಿ ಪ್ರತಿಭಟಿಸಿದ ಆಪ್‌ ಶಾಸಕನ ಬಂಧನ

Update: 2022-05-18 12:52 GMT
Photo: MLA Kuldeep Kumar/ Twitter

ಹೊಸದಿಲ್ಲಿ: ದಿಲ್ಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ಧ್ವಂಸ ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಶಾಸಕ ಕುಲದೀಪ್ ಕುಮಾರ್ ಅವರನ್ನು ಬುಧವಾರ ಬಂಧಿಸಲಾಗಿದೆ ಎಂದು ANI ವರದಿ ಮಾಡಿದೆ. ಬಿಜೆಪಿ ಆಡಳಿತವಿರುವ ಪೂರ್ವ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಈ ಧ್ವಂಸ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಬಿಜೆಪಿ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿದ ಕುಮಾರ್, ಇದರ ವಿರುದ್ಧ ಪ್ರತಿಭಟನೆ ನಡೆಸಿದ ಪಕ್ಷದ ಇತರ ಕಾರ್ಯಕರ್ತರನ್ನೂ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

"ಈ ಜನರು [ಕಲ್ಯಾಣಪುರಿ ನಿವಾಸಿಗಳು] ಮಾನ್ಯ ದಾಖಲೆಗಳನ್ನು ಹೊಂದಿದ್ದಾರೆ, ಅವರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ" ಎಂದು ಕುಮಾರ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಧ್ವಂಸ ಕಾರ್ಯಾಚರಣೆಯನ್ನು ಸುಗಮವಾಗಿ ಕೈಗೊಳ್ಳಲು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

"ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಕಾರ್ಯಾಚರಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿರುವುದಾಗಿ ವರದಿ ತಿಳಿಸಿದೆ.

ಬಿಜೆಪಿ ಆಡಳಿತದಲ್ಲಿರುವ ದಿಲ್ಲಿಯ ಮೂರು ಸ್ಥಳೀಯ ಸಂಸ್ಥೆಗಳು ಕಳೆದ ತಿಂಗಳಿನಿಂದ ನಗರದ ಹಲವು ಭಾಗಗಳಲ್ಲಿ ʼಅತಿಕ್ರಮಣದ ಕಟ್ಟಡಗಳುʼ ಎಂದು ಧ್ವಂಸ ಕಾರ್ಯಾಚರಣೆಯನ್ನು ನಡೆಸಿವೆ. ಆದರೆ, ಇತರೆ ರಾಜಕೀಯ ಪಕ್ಷಗಳು ಮತ್ತು ಕಾರ್ಯಕರ್ತರು ಬಿಜೆಪಿಯು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಸದಸ್ಯರು ಮತ್ತು ಇತರ ವಿರೋಧ ಪಕ್ಷದ ನಾಯಕರು ಈ ಧ್ವಂಸ ಕಾರ್ಯಾಚರಣೆಗಳನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇಂತಹದ್ದೇ ಪ್ರಕರಣವೊಂದರಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಮೇ 12 ರಂದು ನಗರದ ಮದನ್‌ಪುರ ಖಾದರ್ ಪ್ರದೇಶದಲ್ಲಿ ಬಂಧಿಸಲಾಗಿತ್ತು.

ಮೇ 8 ರಂದು, ಶಾಹೀನ್ ಬಾಗ್‌ನಲ್ಲಿ ಧ್ವಂಸಗೊಳಿಸುವ ಕಾರ್ಯಾಚರಣೆಗೆ ಖಾನ್ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಖಾನ್ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಜಹಾಂಗೀರ್‌ಪುರಿ, ತುಘಲಕಾಬಾದ್, ಮಂಗೋಲ್‌ಪುರಿ, ನ್ಯೂ ಫ್ರೆಂಡ್ಸ್ ಕಾಲೋನಿ, ನಜಾಫ್‌ಗಢ್, ಪಶ್ಚಿಮ ವಲಯ, ಜನಕಪುರಿ ಮತ್ತು ಚೌಖಂಡಿ ಸೇರಿದಂತೆ ನಗರದ ಹಲವಾರು ಭಾಗಗಳಲ್ಲಿ ಸ್ಥಳೀಯ ಆಡಳಿತಗಳು ಕಟ್ಟಡಗಳನ್ನು ನೆಲಸಮಗೊಳಿಸಿದೆ.

ದಿಲ್ಲಿಯಲ್ಲಿ ಕೋಮು ಹಿಂಸಾಚಾರ ನಡೆದ ನಾಲ್ಕು ದಿನಗಳ ನಂತರ ಏಪ್ರಿಲ್ 20 ರಂದು ಜಹಾಂಗೀರ್ಪುರಿ ಧ್ವಂಸಗಳನ್ನು ನಡೆಸಲಾಯಿತು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದರೂ ಕೆಲವು ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿದಿತ್ತು. ಬುಲ್ಡೋಝರ್‌ ನಿಂದ ನೆಲಸಮಗೊಂಡ ಬಹುತೇಕ ಎಲ್ಲಾ ಕಟ್ಟಡಗಳು ಮುಸ್ಲಿಮರ ಒಡೆತನದವು ಎಂದು scroll.in ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News