ಕಲ್ಯಾಣ ಕರ್ನಾಟಕದ ಜನರನ್ನು ಎರಡನೆ ದರ್ಜೆ ನಾಗರಿಕರಂತೆ ನಡೆಸಿಕೊಂಡಿದ್ದಾರೆ: ಈಶ್ವರ ಖಂಡ್ರೆ ಆರೋಪ

Update: 2022-05-18 13:32 GMT
ಈಶ್ವರ ಖಂಡ್ರೆ

ಬೆಂಗಳೂರು, ಮೇ 18: ರಾಜ್ಯ ಬಿಜೆಪಿ ಸರಕಾರ ಕಳೆದ ಮೂರು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಮೇಲೆ ಒಂದರ ಮೇಲೆ ಒಂದು ಪ್ರಹಾರ ನಡೆಸುತ್ತಿದೆ. ಕಲ್ಯಾಣ ಕರ್ನಾಟಕದ ಜನರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಂಡು ಬಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗಕ್ಕೆ 371 ಜೆ ವಿಶೇಷ ಸ್ಥಾನಮಾನ ತಂದು ಉದ್ಯೋಗ, ಶಿಕ್ಷಣ ಹಾಗೂ ವಿಶೇಷ ಅನುದಾನದಲ್ಲಿ ಈ ಸರಕಾರ ಕಡೆಗಣಿಸಿದೆ. ಆ ಮೂಲಕ ಘನಘೋರ ಅನ್ಯಾಯ ಮಾಡುತ್ತಿದೆ.
ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಜನ ನಿರುದ್ಯೋಗಿ ಯುವಕರಿದ್ದಾರೆ. ಈ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲಿಲ್ಲ. ರಾಜ್ಯದಲ್ಲಿ ಒಟ್ಟು 2.52 ಲಕ್ಷ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ನೇರ ನೇಮಕಾತಿಗೆ ಸುಮಾರು 30 ಸಾವಿರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದ ಹೊರಗೆ ಇರುವ 2 ಲಕ್ಷ ಖಾಲಿ ಹುದ್ದೆಗಳಲ್ಲಿ ಅದರಲ್ಲಿ ಶೇ.8ರಷ್ಟು ಸಿಗುತ್ತದೆ. ಒಟ್ಟು 50 ಸಾವಿರ ಹುದ್ದೆಗಳು ಖಾಲಿ ಇವೆ ಎಂದರು. 

ಅನುದಾನಗಳೆಲ್ಲವೂ ಕೇವಲ ಕಾಗದದ ಮೇಲಿದೆ. ಇದು ಯಾವುದೇ ರೀತಿ ಕಾರ್ಯಗತವಾಗುವುದಿಲ್ಲ. 2020-21ರಲ್ಲಿ ಈ ಭಾಗಕ್ಕೆ ಅನುದಾನ 1500 ಕೋಟಿಯಿಂದ 1131 ಕೋಟಿಗೆ ಇಳಿಯಿತು. ಇದುವರೆಗೂ ಈ ಹಣದಲ್ಲಿ ಅರ್ಧದಷ್ಟು ಹಣ ಬಳಕೆಯಾಗಿಲ್ಲ. 2021-22ರಲ್ಲಿ 1500 ಕೋಟಿಯಲ್ಲಿ ಖರ್ಚಾಗಿರುವುದು ಕೇವಲ 400 ಕೋಟಿ ಮಾತ್ರ. 14 ತಿಂಗಳಾದರೂ ಇವರಿಗೆ ಹಣ ವೆಚ್ಚ ಮಾಡಲು ಆಗಿಲ್ಲ. ಇನ್ನು ಈ ವರ್ಷ ಕೇವಲ ಬ್ರೇಕಿಂಗ್ ನ್ಯೂಸ್ ಮಾಡಲು 3 ಸಾವಿರ ಕೋಟಿ ಇಟ್ಟಿದ್ದಾರೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗುತ್ತಿದೆ. ನೀರಾವರಿ ಯೋಜನೆಗಳಲ್ಲಿ 2019ರಲ್ಲಿ ಘೋಷಣೆಯಾದ ಯೋಜನೆಗಳಿಗೆ ತಾಂತ್ರಿಕ ಅನುಮೋದನೆ ಆದರೂ ಯಾವುದೇ ಅನುದಾನ ನೀಡಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದೇ ಒಂದು ಮನೆಯನ್ನು ನೀಡಿಲ್ಲ. ಹಿಂದೆ ನೀಡಿದ್ದ ಅಂಬೇಡ್ಕರ್ ಯೋಜನೆ, ಬಸವ ವಸತಿ ಯೋಜನೆಯ ಸಾವಿರಾರು ಬಡ ಫಲಾನುಭವಿಗಳಿಗೆ ಕಂತು ಬಿಡುಗಡೆ ಕೆಲಸವೂ ಆಗಿಲ್ಲ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News