ಪಿಯುಸಿ ಮಾರ್ಗಸೂಚಿ ಪ್ರಕಟ: ಸಮವಸ್ತ್ರ ಕಡ್ಡಾಯಗೊಳಿಸಿದ ಪಿಯು ಬೋರ್ಡ್

Update: 2022-05-18 13:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ತರಗತಿಗಳಿಗೆ ಮೇ 20ರ ನಂತರ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಜೂ.1ರಿಂದ ದಾಖಲಾತಿಗಳು ಆರಂಭವಾಗಲಿದ್ದು, ಈ ಬಾರಿ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 

ಕಳೆದ ವರ್ಷ ಉಂಟಾಗಿದ್ದ ಶಾಲಾ ಸಮವಸ್ತ್ರ, ಹಿಜಾಬ್-ಕೇಸರಿ ವಿವಾದವು ಹೈಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಸರಕಾರದ ಸಮವಸ್ತ್ರ ಪಾಲನೆಯನ್ನು ಎತ್ತಿ ಹಿಡಿದು, ಹಿಜಾಬ್ ಇಸ್ಲಾಂನ ಭಾಗವಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಿಜಾಬ್ ಪರ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. 

ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಸಮವಸ್ತ್ರ ಕಡ್ಡಾಯಗೊಳಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಒಂದು ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರವನ್ನು ನಿಗದಿಪಡಿಸದಿದ್ದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡುವ ಸಮವಸ್ತ್ರವನ್ನು ಧರಿಸಬೇಕು ಎಂದು ತಿಳಿಸಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯಲು ಜೂ. 15 ಕೊನೆಯ ದಿನವಾಗಿದ್ದು, ತರಗತಿಗಳು ಜೂ. 9ರಿಂದಲೇ ಆರಂಭವಾಗಲಿದೆ. ಅ.1 ರಿಂದ ಅ.12ರವರೆಗೆ ಮಧ್ಯಂತರ ರಜೆ ಇರಲಿದೆ. 2023 ಮಾ.31 ಕೊನೆಯ ಕಾರ್ಯನಿರತ ದಿನವಾಗಿದೆ ಹಾಗೂ ಎ.1ರಿಂದ ಬೇಸಗೆ ರಜೆ ಆರಂಭವಾಗಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News