ಪಠ್ಯಪುಸ್ತಕದಲ್ಲಿ ಹೆಡಗೆವಾರ್ ಭಾಷಣ ಸೇರ್ಪಡೆ ನನ್ನ ಪ್ರಕಾರ ಸರಿ: ಕೋಟ ಶ್ರೀನಿವಾಸ ಪೂಜಾರಿ

Update: 2022-05-18 14:33 GMT

ಚಿಕ್ಕಮಗಳೂರು: ನಾರಾಯಣಗುರು ಮತ್ತು ಭಗತ್‍ಸಿಂಗ್ ಅವರನ್ನು ಪಠ್ಯದಲ್ಲಿ ಕೈಬಿಟ್ಟಿರುವ ಬಗ್ಗೆ ತನಗೆ ಮಾಹಿತಿ ಇಲ್ಲ. ಈ ಕುರಿತು ಪ್ರಾಥಮಿಕ ಮುತ್ತು ಪ್ರೌಢಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವಬಲಿರಾಮ ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿರುವುದು ನನ್ನ ದೃಷ್ಟಿಯಲ್ಲಿ ಸರಿಯಾಗಿದೆ ಎಂದು ಸಮಾಜ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಹಗರಣದ ಕುರಿತು ಗಮನ ಸೆಳೆದಾಗ, ಅನರ್ಹರು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೆ ಅದು ತಪ್ಪು, ಯಾರೇ ಪಡೆದುಕೊಂಡಿದ್ದರೂ ಕಾನೂನಿನ ಪ್ರಕಾರ ಕ್ರಮ ಆಗುತ್ತದೆ. ಶಾಸಕ ರೇಣುಕಾಚಾರ್ಯ ಅವರ ಪುತ್ರಿಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಬಗ್ಗೆ ಶಾಸಕ ಸ್ಪಷ್ಟನೆ ನೀಡಿದ್ದು, ನಕಲಿ ಜಾತಿ ಪ್ರಮಾಣ ಪತ್ರವನ್ನು ಪಡೆದಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಅವರು ತಪ್ಪು ಮಾಡಿದ್ದರೆ ಕಾನೂನು ಕ್ರಮಕ್ಕೆ ಒಳಪಡಲಿದ್ದಾರೆ ಎಂದರು.

ಈ ವರ್ಷ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಘಟಕ ಯೋಜನೆಯಡಿ 100 ಕೊಳವೆಬಾವಿಗಳನ್ನು ಪರಿಶಿಷ್ಟಜಾತಿ, ಪಂಗಡದವರಿಗೆ ನೀಡಲಾಗುವುದು, ಹಿಂದುಳಿದ ವರ್ಗದವರಿಗೆ 14-17 ಕೊಳವೆಬಾವಿಗಳನ್ನು ನೀಡಲಾಗುವುದು ಎಂದ ಅವರು, ಕೊಳವೆಬಾವಿ ಕೊರೆದಿರುವ ಬಗ್ಗೆ ಅವ್ಯಹಾರ ಕುರಿತು ಹಿರಿಯ ಅಧಿಕಾರಿಗಳ ನಡೆಸಿರುವ ವರದಿಯನ್ನು ತರಿಸಿಕೊಂಡು ಪರಿಶೀಲಿಸಲಾಗುವುದು. ಒಂದೇ ಒಂದು ರೂ. ಹೆಚ್ಚುಕಡಿಮೆ ಆಗಿದ್ದರೆ ಅದರ ತಪ್ಪಿಗೆ ಶಿಕ್ಷೆ ಅನುಭವಿಸಲು ಸಿದ್ಧವೆಂದು ವಿಧಾನಸಭೆಯಲ್ಲಿ ಉತ್ತರಿಸಿದ್ದೇನೆ. ಆರೋಪ ಮಾಡಿರುವವರೊಂದಿಗೆ ಚರ್ಚಿಸಲು ಸಿದ್ದನಿದ್ದೇನೆ. ಆರೋಪ ಮಾಡಿದವರು ಒಂದು ಬಾರಿ ಸಚಿವರ ಪಾತ್ರವಿದೆ ಎನ್ನುತ್ತಾರೆ, ಇನ್ನೊಂದು ಬಾರಿ ಸಚಿವರ ಪಾತ್ರ ಇಲ್ಲ ಎನ್ನುತ್ತಾರೆ, ಯಾವುದು ಸತ್ಯ, ಯಾವುದು ಸುಳ್ಳು ಎಂಬ ಬಗ್ಗೆ ಗೊಂದಲವಿದೆ. ಟೀಕೆಯನ್ನು ಸತ್ಯಕ್ಕೆ ಅಪಚಾರವಾಗುವಂತೆ ಮಾಡಬಾರದು ಎಂದು ಹೇಳಿದರು.

ಕನಕದಾಸರ ಹೆಸರಿನಲ್ಲಿ ಹಿಂದುಳಿದ ವರ್ಗದವರಿಗೆ 50 ವಿದ್ಯಾರ್ಥಿನಿಲಯಗಳನ್ನು ನಿರ್ಮಿಸುತ್ತಿದ್ದು, ಪ್ರತಿಹಾಸ್ಟೆಲ್‍ಗೆ 3.50 ಕೋಟಿ ವೆಚ್ಚವಾಗಲಿದೆ. ಪರಿಶಿಷ್ಟರ ಏಳಿಗೆಗಾಗಿ ರಾಜ್ಯದಲ್ಲಿ 100 ಅಂಬೇಡ್ಕರ್ ವಸತಿನಿಲಯಗಳನ್ನು ತೆರೆಯಲಾಗುವುದು. ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ಕಲೆ ಕರಾಟೆಯನ್ನು ಕಲಿಸಿಕೊಡಲಾಗುತ್ತಿದೆ. ರಾಯಚೂರಿನಲ್ಲಿ ಮಗುವನ್ನು ದೇವಾಲಯದೊಳಗೆ ಪ್ರವೇಶಿಸಲು ಬಿಡದ ಪ್ರಕರಣ ಸಂಬಂದ ಮಗುನಿನ ಹೆಸರಿನಲ್ಲಿ ವಿನಯ ಸಾಮರಸ್ಯ ಯೋಜನೆ ಜಾರಿಗೊಳಿಸಿ ಅಸ್ಪೃಶ್ಯತೆ ನಿವಾರಣೆಗೆ ಯೋಜನೆ ರೂಪಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿರುವ 2408 ಹಾಸ್ಟೆಲ್‍ಗಳ ಪೈಕಿ 30ಕ್ಕೂ ಹೆಚ್ಚು ಹಾಸ್ಟೆಲ್‍ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅದಕ್ಕಾಗಿ 4-4 ಕೋಟಿ ರೂ. ವೆಚ್ಚವಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಂತಹಂತವಾಗಿ ಕ್ರಮವಹಿಸಲಾಗುವುದು ಎಂದ ಅವರು, ರಾಜ್ಯ ಸರಕಾರ ವಿಧಾನಸೌಧ ಪಕ್ಕದಲ್ಲಿ ಅಂಬೇಡ್ಕರ್ ಸ್ಪೂರ್ತಿಧಾಮ ನಿರ್ಮಿಸುತ್ತಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಟ್ಟಡ ನಿರ್ಮಾಣಕ್ಕೆ 50 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆಂದರು.

ಬಿಜೆಪಿ ಮುಖಂಡರಾದ ಬಿ.ರಾಜಪ್ಪ, ದೀಪಕ್ ದೊಡ್ಡಯ್ಯ, ಕನಕರಾಜ್ ಅರಸ್, ಜಾವಳಿ ಪರೀಕ್ಷಿತ್ ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News