ನೇಟೊ ಸೇರ್ಪಡೆಗೆ ಫಿನ್ಲ್ಯಾಂಡ್, ಸ್ವೀಡನ್ ಅರ್ಜಿ

Update: 2022-05-18 17:06 GMT
PHOTO SOURCE:REUTERS

ಬ್ರಸೆಲ್ಸ್, ಮೇ 18: ವಿಶ್ವದ ಅತೀ ದೊಡ್ಡ ಮಿಲಿಟರಿ ಒಕ್ಕೂಟ ನೇಟೊ ಸೇರ್ಪಡೆಗೆ ಫಿನ್ಲ್ಯಾಂಡ್ ಮತ್ತು ಸ್ವೀಡನ್  ಅಧಿಕೃತವಾಗಿ ಅರ್ಜಿ ಹಾಕಿವೆ ಎಂದು ನೇಟೊದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್‌ಬರ್ಗ್  ಹೇಳಿದ್ದಾರೆ. ನೇಟೊ ಸೇರ್ಪಡೆಗೆ ಫಿನ್ಲ್ಯಾಂಡ್ ಮತ್ತು ಸ್ವೀಡನ್ ಸಲ್ಲಿಸಿರುವ ಕೋರಿಕೆಯನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಈ ಎರಡೂ ದೇಶಗಳು ನಮ್ಮ ನಿಕಟ ಪಾಲುದಾರರು. ಇದೊಂದು ಐತಿಹಾಸಿಕ ಕ್ಷಣವಾಗಿದ್ದು ಇದನ್ನು ನಾವು ಬಿಟ್ಟುಬಿಡಬಾರದು ಎಂದು ಬ್ರಸೆಲ್ಸ್‌ನಲ್ಲಿನ ನೇಟೊ ಪ್ರಧಾನ ಕಚೇರಿಯಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಸ್ಟಾಲ್ಟನ್‌ಬರ್ಗ್ ಹೇಳಿದರು. ಶೀತಲ ಯುದ್ಧದ ಬಹುತೇಕ ಅವಧಿಯಲ್ಲಿ ನಿರ್ಲಿಪ್ತ ನಿಲುವು ತಳೆದಿದ್ದ ಈ ಎರಡು ದೇಶಗಳು ಈಗ ರಶ್ಯದ ಆಕ್ರಮಣದ ಭೀತಿಯ ಕಾರಣ ನೇಟೊ ಸೇರ್ಪಡೆಗೆ ಮುಂದಾಗಿರುವುದು ದಶಕಗಳಲ್ಲೇ ಯುರೋಪ್‌ನ ಭದ್ರತಾ ಸ್ವರೂಪದಲ್ಲಿನ ಅತ್ಯಂತ ಗಮನಾರ್ಹ ಬದಲಾವಣೆಯಾಗಿದೆ.

ಇದೀಗ 30 ಸದಸ್ಯರ ನೇಟೊ ಒಕ್ಕೂಟ ಈ ಅರ್ಜಿಯ ಪರಿಶೀಲನೆ ನಡೆಸಲಿದ್ದು ಇದಕ್ಕೆ ಸುಮಾರು 15 ದಿನ ಬೇಕಾಗಬಹುದು. ಫಿನ್ಲ್ಯಾಂಡ್, ಸ್ವೀಡನ್ ನೇಟೊ ಸೇರ್ಪಡೆಗೆ ಟರ್ಕಿಯ ಅಧ್ಯಕ್ಷ ಎರ್ಡೋಗನ್ ತೀವ್ರ ವಿರೋಧ ಮತ್ತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆಕ್ಷೇಪಗಳನ್ನು ಕಡೆಗಣಿಸಿ ಅರ್ಜಿಗೆ ಮಾನ್ಯತೆ ದೊರೆತರೆ, ಮುಂದಿನ ಕೆಲ ತಿಂಗಳಲ್ಲೇ ಈ ಎರಡು ದೇಶಗಳು ನೇಟೊದ ಸದಸ್ಯರಾಗಲಿವೆ. ಸಾಮಾನ್ಯವಾಗಿ ಸದಸ್ಯತ್ವದ ಅರ್ಜಿಯ ಪರಿಶೀಲನೆ ಮತ್ತು ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿ ಒಂದು ವರ್ಷ ಬೇಕಾಗುತ್ತದೆ. ಆದರೆ ಈಗಿನ ಸಂದರ್ಭವನ್ನು ಗಮನಿಸಿ ಈ ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವಂತೆ ಕೆನಡಾ ಸಹಿತ ಹಲವು ದೇಶಗಳು ಆಗ್ರಹಿಸಿವೆ. ಅರ್ಜಿ ಪರಿಶೀಲನೆ ಪೂರ್ಣಗೊಂಡು ಸದಸ್ಯತ್ವ ಮಂಜೂರಾಗುವವರೆಗಿನ ಅವಧಿಯಲ್ಲಿ ಎರಡೂ ದೇಶಗಳಿಗೆ ಭದ್ರತೆಯ ಭರವಸೆಯನ್ನು ಇಂಗ್ಲೆಂಡ್ ಸಹಿತ ಹಲವು ನೇಟೊ ದೇಶಗಳು ನೀಡಿವೆ. ನಮ್ಮ ಎಲ್ಲಾ ಮಿತ್ರರೂ ನೇಟೊ ವಿಸ್ತರಣೆಯ ಮಹತ್ವವನ್ನು ಒಪ್ಪಿಕೊಂಡಿದ್ದಾರೆ. ಎರಡು ದೇಶಗಳ ಸದಸ್ಯತ್ವದ ವಿಷಯದಲ್ಲಿ ನಾವೆಲ್ಲಾ ಒಟ್ಟಿಗೆ ನಿಲ್ಲಬೇಕೆಂದು ನಿರ್ಧರಿಸಿದ್ದೇವೆ ಎಂದು ಸ್ಟಾಲ್ಟೆನ್ಬರ್ಗ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News