ನಾಲೆಗಳ ಆಧುನೀಕರಣದಲ್ಲಿ ಗೋಲ್‍ಮಾಲ್: ಸಿದ್ದರಾಮಯ್ಯ ಆರೋಪ

Update: 2022-05-18 17:56 GMT

ಬೆಂಗಳೂರು, ಮೇ 18: ರಾಯಚೂರು ಜಿಲ್ಲೆ ಲಿಂಗಸೂಗೂರು ಹಾಗೂ ದೇವದುರ್ಗಾ ತಾಲೂಕುಗಳಲ್ಲಿ ನಾರಾಯಣಪುರ ಬಲದಂಡೆ ನಾಲೆಯ 1 ರಿಂದ 15 ವಿತರಣಾ ನಾಲೆಗಳ ಆಧುನೀಕರಣ ಮಾಡುವಲ್ಲಿ ಗೋಲ್‍ಮಾಲ್ ನಡೆದಿದ್ದು, ಸರಕಾರ ಭಾಗಿಯಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಯಚೂರು ಜಿಲ್ಲೆ ಲಿಂಗಸೂಗೂರು ಹಾಗೂ ದೇವದುರ್ಗಾ ತಾಲೂಕುಗಳಲ್ಲಿ ನಾರಾಯಣಪುರ ಬಲದಂಡೆ ನಾಲೆಯ 1 ರಿಂದ 15 ವಿತರಣಾ ನಾಲೆಗಳ ಆಧುನೀಕರಣ ಮಾಡಲು 2021 ರಲ್ಲಿ 828 ಕೋಟಿ ರೂಪಾಯಿ ಮೊತ್ತದ ಹಾಗೂ 16 ರಿಂದ 18 ಉಪಕಾಲುವೆಗಳ ಅಂದಾಜು ವೆಚ್ಚ 791 ಕೋಟಿ ರೂಪಾಯಿಯ ಒಟ್ಟು 1,619 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ಈ ಎರಡೂ ಟೆಂಡರ್ ಕೆಲಸವೇ ಆಗದೆ 425 ಕೋಟಿ ರೂಪಾಯಿ ಬಿಲ್ ಪಾವತಿಯಾಗಿದೆ ಎಂದರು.

ಹಾಲಿ ಶಾಸಕ ಹುಲಿಗೇರಿ ಅವರು ಮುಖ್ಯಮಂತ್ರಿಗಳಿಗೆ, ಕೇಂದ್ರ ಹಾಗೂ ರಾಜ್ಯದ ನೀರಾವರಿ ಸಚಿವರಿಗೆ, ಜಲ ಸಂಪನ್ಮೂಲ ಇಲಾಖೆಯ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಾದ ನಂತರ ಮುಖ್ಯಮಂತ್ರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಪತ್ರ ಬರೆದಿದ್ದಾರೆ. 

ಮುಖ್ಯಮಂತ್ರಿಗಳು ಪತ್ರ ಬರೆದ ಮೇಲೆ ಒಂದು ತಾಂತ್ರಿಕ ಸಮಿತಿಯನ್ನು ರಚನೆ ಮಾಡಲಾಗಿದೆ. ಅದರಲ್ಲಿ ರಾಮ್‍ಪುರೆ, ಶಿವಕುಮಾರ್, ಅಶೋಕ್ ಹೊಸನಾಡ್, ರಾಜೇಂದ್ರ, ಪ್ರದೀಪ್ ಮಿತ್ರ ಮಂಜುನಾಥ್ ಸೇರಿದಂತೆ 6 ಜನ ಸದಸ್ಯರಿದ್ದಾರೆ. ಈ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಒಂದು ವರದಿ ನೀಡಿದೆ. ಸಮಿತಿ ನೀಡಿದ ವರದಿಯಲ್ಲಿ ಈ ಮೊದಲೇ ಮಣ್ಣು ತುಂಬಿಸುವ ಕಾರ್ಯ ಮಾಡಿ ಮುಗಿಸಿರುವುದರಿಂದ ಈಗ ಮತ್ತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅಗತ್ಯವೇನಿದೆ? ಇವರು ಮಣ್ಣು ತುಂಬಲಾಗಿದೆ ಎಂದು ತೋರಿಸುತ್ತಿರುವ ಲೆಕ್ಕ ಸುಳ್ಳು ಎಂದು ಹೇಳಿದೆ.

ನಿಯಮದ ಪ್ರಕಾರ ಕೆಂಪು ಮಣ್ಣು ಇರುವ ಕಡೆ ಗ್ರಾವೆಲ್ ಹಾಕಬೇಕಾದ ಅಗತ್ಯವಿಲ್ಲ, ಆದರೆ ಇಲ್ಲಿ ಗ್ರಾವೆಲ್ ಹಾಕಿದ್ದೇವೆ ಎಂದು ಸುಳ್ಳು ಲೆಕ್ಕ ತೋರಿಸಿದ್ದಾರೆ. ಈ ಯೋಜನೆಯಲ್ಲಿ ಇಂಜಿನಿಯರ್‍ಗಳು, ಕಂಟ್ರಾಕ್ಟರ್‍ಗಳು ಹಾಗೂ ಸರಕಾರ ಎಲ್ಲರೂ ಸೇರಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಆಪಾದಿಸಿದರು.

ಹಿಂದೊಮ್ಮೆ ಆಧುನೀಕರಣಗೊಂಡ ಕಾಲುವೆಗಳಿಗೆ ಮತ್ತೆ ಮರು ನಿರ್ಮಾಣ ಮಾಡುವುದಾಗಿ ಹೇಳಿ ದುಡ್ಡು ಹೊಡೆಯಲಾಗಿದೆ. ಮಣ್ಣು ತುಂಬಿಸಿದ್ದೇವೆ, ಕಲ್ಲು ಬಂಡೆ ಬ್ಲಾಸ್ಟ್ ಮಾಡಿದ್ದೇವೆ, ಮುರಮ್ ಹಾಕಿದ್ದೇವೆ ಎಂದೆಲ್ಲ ಸುಳ್ಳು ಲೆಕ್ಕ ನೀಡಿ ಬಿಲ್ ಪಡೆಯಲಾಗಿದೆ ಎಂದ ಅವರು, ಎಸ್ಟಿಮೇಟ್ ಕಮಿಟಿಯ ಅಧ್ಯಕ್ಷ ಬಿಜೆಪಿ ಶಾಸಕ ಅಭಯ್ ಪಾಟೀಲ್, ದೊಡ್ಡನಗೌಡ ಪಾಟೀಲ್ ಕೂಡ ಕಮಿಟಿಯ ಒಬ್ಬ ಸದಸ್ಯ.

ಈ ಎಸ್ಟಿಮೇಟ್ ಕಮಿಟಿಯವರು ಪರಿಶೀಲನೆ ನಡೆಸಲು ಸ್ಥಳಕ್ಕೆ ಹೋದರೆ ಗುತ್ತಿಗೆದಾರರ ಪರವಾದ ಗೂಂಡಾಗಳು ಇವರನ್ನು ಒಳಗೆ ಬಿಡಲೇ ಇಲ್ಲ ಎಂದು ವರದಿಯಾಗಿದೆ ಎಂದು ಹೇಳಿದರು.

ಪ್ರಮುಖವಾಗಿ ಸುಮಾರು 800 ಕೋಟಿ ರೂಪಾಯಿಯಷ್ಟು ಹಣವನ್ನು ಮಣ್ಣು ತುಂಬಿಸುವುದಾಗಲೀ, ಮುರಮ್ ಹಾಕುವುದಾಗಲೀ ಮಾಡದೆ ದುಡ್ಡು ನುಂಗಲಾಗಿದೆ. ಹಾಗಾಗಿ, ಈ ಹಗರಣವನ್ನು ಸದನ ಸಮಿತಿಗೆ ವಹಿಸುವುದು ಉತ್ತಮವಾಗಿದೆ ಸೂಕ್ತ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News