ಧಾರಾಕಾರ ಮಳೆ: ಶಿವಮೊಗ್ಗದಲ್ಲೂ ಶಾಲೆಗಳಿಗೆ ಇಂದು (ಮೇ 19) ರಜೆ ಘೋಷಣೆ
Update: 2022-05-19 09:25 IST
ಶಿವಮೊಗ್ಗ, ಮೇ 19: ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದು ಇಡೀ ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ಮೇ 19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ.
ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇವತ್ತು ಭಾರಿ ಮಳೆಯಾಗುವ ಸಂಭವವಿದೆ. ಸುಮಾರು 10 ಸೆಂಟಿಮೀಟರ್ ನಿಂದ 15 ಸೆಂಟಿಮೀಟರ್ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಕೆಪಿಟಿಸಿಎಲ್ ಎಂ. ಆರ್.ಎಸ್. ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಆರ್.ಯೋಗೇಶ್ ತಿಳಿಸಿದ್ದಾರೆ.