ಭಾರೀ ಮಳೆ: ಮೈಸೂರು ಜಿಲ್ಲಾದ್ಯಂತ ಇಂದು (ಮೇ 19) ಶಾಲೆಗಳಿಗೆ ರಜೆ ಘೋಷಣೆ
ಮೈಸೂರು, ಮೇ 19: ಮೈಸೂರು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಕಾರಣ ಗುರುವಾರ ಒಂದು ದಿನ ಒಂದರಿಂದ ಹತ್ತನೇ ತರಗತಿ ವರೆಗಿನ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ ಒಂದು ವಾರದಿಂದಲೂ ಮೈಸೂರು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಇದೀಗ ಮತ್ತಷ್ಟು ಬಿರುಸುಗೊಂಡಿದೆ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯುಂಟಾಗುತ್ತದೆ ಎಂಬುದನ್ನು ಅರಿತು ಸಾರ್ವಜನಿಜ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಅವರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅನುಮತಿ ಪಡೆದು ರಜೆ ಘೋಷಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ದಿನಾಂಕ 19. 5 .2022 ರಂದು ಒಂದು ದಿನ ಮಳೆ ರಜೆ ಘೋಷಣೆ ಮಾಡಲಾಗಿದೆ. ಮುಂದಿನ ರಜಾದಿನಗಳಲ್ಲಿ ಈ ಒಂದು ದಿನದ ಕರ್ತವ್ಯವನ್ನು ನಿರ್ವಹಿಸುವ ಷರತ್ತಿಗೆ ಒಳಪಟ್ಟು ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಿಗೆ ( ಒಂದನೇ ತರಗತಿಯಿಂದ 10 ನೇ ತರಗತಿಯವರೆಗೆ) ಈ ದಿನ ಮಾತ್ರ ರಜೆ ಘೋಷಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.