ಶಿವಮೊಗ್ಗ | ಮಳೆಯಬ್ಬರಕ್ಕೆ ಜನತೆ ತತ್ತರ: ರಸ್ತೆಗಳು ಜಲಾವೃತ, ಕೃಷಿಗೆ ಹಾನಿ
ಶಿವಮೊಗ್ಗ, ಮೇ 19: ಜಿಲ್ಲಾದ್ಯಂತ ಕಳೆದ ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರದ ಕೆಲವು ಕಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದರೆ, ಇನ್ನು ಕೆಲವೆಡೆ ಶಾಲೆಗಳ ಆವರಣದಲ್ಲಿ ನೀರು ಆವರಿಸಿದೆ. ತೋಟ, ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಶಿವಮೊಗ್ಗ ನಗರದ ವಿದ್ಯಾನಗರದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕೋರ್ಟ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಚಾಲನೆಗೆ ಸವಾರರು ಹರಸಾಹಸ ಪಡುವಂತಾಗಿದೆ.
ಇನ್ನು ಆರ್ ಎಂಎಲ್ ನಗರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದುಹೋಗಿದೆ. ಪೈಲ್ ಲೈನ್ ದುರಸ್ತಿ ಮಾಡದೆ ಹೋದರೆ ಈಡಿ ಏರಿಯಾ ಸಂಪೂರ್ಣ ಜಲಾವೃತವಾಗುವ ಭೀತಿ ಎದುರಾಗಿದೆ.
ಅಮೀರ್ ಅಹ್ಮದ್ ಕಾಲನಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮತ್ತು ಪಿಡಬ್ಲ್ಯುಡಿ ಕಾಮಗಾರಿಗಳಿಂದಾಗಿ ನೀರು ಹರಿಯದೆ ರಸ್ತೆ ಕೆರೆಯಂತಾಗಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಾಗಿದೆ.
ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ಕರ್ಮಕಾಂಡದ ಹಿನ್ನಲೆಯಲ್ಲಿ ಬಾಕ್ಸ್ ಚರಂಡಿಯಲ್ಲಿ ಡ್ರೈನೇಜ್ ನಲ್ಲಿ ನೀರು ಹರಿಯದೆ ರಸ್ತೆಯ ಮೇಲೆ ಹರಿಯುವಂತಾಗಿದೆ. ಈ ಪರಿಸ್ಥಿತಿ ವಿನೋಬ ನಗರ 60 ಅಡಿ ರಸ್ತೆ ಹಾಗೂ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆಯಲ್ಲಿ ನಿರ್ಮಾಣವಾಗಿದೆ.
ಭಾರೀ ಮಳೆಯಿಂದಾಗಿ ರತ್ನಾಕರ ಲೇಔಟ್ ನ ಗಾರೆ ಚಾನೆಲ್ ತುಂಬಿದ್ದು ಜಲಪಾತದಂತೆ ಬೀಳುವ ದೃಶ್ಯ ನೋಡುಗರನ್ನು ಸೆಳೆಯುತ್ತಿದೆ.
ಶಿವಮೊಗ್ಗದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ ಮಳೆ ಮತ್ತಷ್ಟು ಬಿರುಸುಗೊಂಡರೆ ತಗ್ಗು ಪ್ರದೇಶದ ಒಂದಿಷ್ಟು ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.