×
Ad

ಮಂಡ್ಯ | ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥ: ನಾಲೆಗಳು ಒಡೆದು ಬೆಳೆಗಳು ಜಲಾವೃತ

Update: 2022-05-19 13:40 IST
Editor : Saleeth Sufiyan

ಮಂಡ್ಯ, ಮೇ 19: ಜಿಲ್ಲಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ವಿವಿಧೆಡೆ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ನಾಲೆಗಳು ಒಡೆದು ಬೆಳೆಗಳು ಜಲಾವೃತವಾಗಿವೆ. ಸೇತುವೆ, ರಸ್ತೆಗಳು ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ.

ಮತ್ತೊಂದೆಡೆ ಮಂಡ್ಯ ನಗರದ ಕೆರೆಯಂಗಳದಲ್ಲಿ ನಿರ್ಮಿಸಿರುವ ಬಡಾವಣೆ ಸಂಪೂರ್ಣ ಜಲಾವೃತವಾಗಿ ನೂರಾರು ಬೀಡಿ ಕಾರ್ಮಿಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ನಗರಸಭೆಗೆ ಮುತ್ತಿಗೆಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಗಳಿಗೆ ರಜೆ: ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ ಹಾಗೂ (1ರಿಂದ 10 ನೇ ತರಗತಿಯವರೆಗೆ) ಶಾಲೆಗೆ ಇಂದು (ಮೇ 19ರಂದು) ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ರಜೆ ಘೋಷಿಸಲಾಗಿದೆ.

ಕೆ.ಆರ್.ಎಸ್.ಗೆ 15000 ಕ್ಕೂ ಅಧಿಕ ಒಳಹರಿವು:  ಕೆ.ಆರ್.ಎಸ್. ನೀರಿನ ಮಟ್ಟ ಏರಿಕೆಯಾಗಿದೆ. ಒಳ ಹರಿವಿನ ಪ್ರಮಾಣ ಕೂಡ 15,000 ಕ್ಯುಸೆಕ್ ದಾಟಿದೆ. ಇಂದಿನ ಜಲಾಶಯದ ಮಟ್ಟ 101.72 ಅಡಿ ಇದೆ. ಒಳಹರಿವು 15885 ಕ್ಯುಸೆಕ್ ಹಾಗೂ ಹೊರ ಹರಿವು 3,524 ಕ್ಯುಸೆಕ್ ಇದೆ.

ಮಾರ್ಕೋನಹಳ್ಳಿ ಜಲಾಶಯದಿಂದ ಶಿಂಷಾ ನದಿಗೆ ನೀರು:

ಕುಣಿಗಲ್ ತಾಲೂಕು ಮಾರ್ಕೋನಹಳ್ಳಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯದಿಂದ ಶಿಂಷಾ ನದಿಗೆ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ.

ಮಾರ್ಕೋನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಹಾಗೂ ಶಿಂಷ ನದಿ ಪಾತ್ರದಲ್ಲಿನ ಅಪಾಯದ ಅಂಚಿನ ಪ್ರದೇಶವನ್ನು ಗುರುತಿಸಿ, ಸಾರ್ವಜನಿಕರು ಮತ್ತು ಜಾನುವಾರುಗಳ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ, ಕಾಳಜಿ ಕೇಂದ್ರ ಹಾಗೂ ಗೋಶಾಲೆ ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಸೂಚಿಸಿದ್ದಾರೆ.

ಸಾರ್ವಜನಿಕರು ಸಹ ಮಾರ್ಕೋನಹಳ್ಳಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಶಿಂಷ ನದಿ ಪಾತ್ರದಲ್ಲಿನ ಅಪಾಯದ ಅಂಚಿನ ಪ್ರದೇಶವನ್ನು ಪ್ರವೇಶಿಸದಂತೆ ಮುನ್ನಚ್ಚರಿಕೆ ವಹಿಸುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - Saleeth Sufiyan

Audience Development & Tech

Editor - Saleeth Sufiyan

Audience Development & Tech

Similar News