ರಾಜಕೀಯಕ್ಕಾಗಿ ಪಠ್ಯ ಪರಿಷ್ಕರಣೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಬಲಿಯಾಗುತ್ತಿದೆ: ಶಿಕ್ಷಣ ತಜ್ಞ ನಿರಂಜನಾರಾಧ್ಯ ಟೀಕೆ

Update: 2022-05-19 14:03 GMT

ಬೆಂಗಳೂರು, ಮೇ 19: ಮಕ್ಕಳ ಪಾಲಕರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬಲಿಕೊಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಟೀಕಿಸಿದೆ.

ವೇದಿಕೆಯ ಮಹಾಪೋಷಕ ಹಾಗೂ ಶಿಕ್ಷಣತಜ್ಞ ನಿರಂಜನಾರಾಧ್ಯ ಅವರು ಪ್ರಕಟನೆ ಹೊರಡಿಸಿದ್ದು, ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ಕುರಿತಾಗಿ ಪಾಠ ಸೇರಿಸುವುದು ಪಾಠ ತೆಗೆಯುವ ಆಟವನ್ನು ಮುಂದುವರೆಸಿದ್ದು, ಇದು ವಿಷಾದಕರ ಬೆಳವಣಿಗೆ ಆಗಿದೆ. ನಮಗಿರುವ ಇತಿಮಿತಿಯ ಜ್ಞಾನದಲ್ಲಿ, ನಮ್ಮ ಮಕ್ಕಳ ಶಿಕ್ಷಣ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿ ಪಠ್ಯ ಇರಬೇಕು ಎಂದು ನಮ್ಮ ಆಶಯವಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಮಕ್ಕಳು ಸ್ವಾತಂತ್ರ್ಯ ಚಳುವಳಿಯ ನೈಜ ಇತಿಹಾಸವನ್ನು ಅರಿತು, ತ್ಯಾಗ ಬಲಿದಾನ ಹೋರಾಟಗಳ ಮೂಲಕ ಪಡೆದ ಈ ಮೌಲ್ಯಯುತ ಸ್ವಾತಂತ್ರ್ಯವನ್ನು ಗೌರವಿಸಲು ಅಗತ್ಯವಾದ ಜ್ಞಾನವನ್ನು ಕಟ್ಟಿಕೊಡಬೇಕು. ಜೊತೆಗೆ, ಸ್ವಾತಂತ್ರ್ಯ ಚಳುವಳಿಯ ಅಂತಿಮ ಫಲಿತಾಂಶವಾಗಿ ರೂಪಗೊಂಡ ಸಂವಿಧಾನವನ್ನು ಪೂರ್ಣವಾಗಿ ಜಾರಿಗೊಳಿಸುವ ಮೂಲಕ ಒಂದು ಸಮ ಸಮಾಜವನ್ನು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಣವು ನಮ್ಮಲ್ಲಿರುವ ಹಲವು ಸಾಮಾಜಿಕ, ಆರ್ಥಿಕ ಹಾಗು ನಿರುದ್ಯೋಗದಂತಹ ಸಮಸ್ಯೆಗಳಿಗೆ ಪರಿಹಾರವಾಗಬೇಕು. ಆದರೆ ಈಗಿನ ಪರಿಷ್ಕರಣೆಯಲ್ಲಿ ಇದಾವುದು ಚರ್ಚೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಪಠ್ಯಪುಸ್ತಕದ ಪರಿಷ್ಕರಣಾ ಪ್ರಹಸನವನ್ನು ಇಲ್ಲಿಗೆ ನಿಲ್ಲಿಸಿ, ಮಕ್ಕಳಿಗೆ ಆದಷ್ಟು ಶೀಘ್ರವಾಗಿ ಪಠ್ಯಪುಸ್ತಕಗಳನ್ನು ಒದಗಿಸಲು ಕ್ರಮ ವಹಿಸಬೇಕು. ಈಗಿನ ಪರಿಷ್ಕರಣಾ ಕ್ರಮ ಮತ್ತು ವಿಷಯಗಳ ಆಯ್ಕೆಯಲ್ಲಿ ಹೆಚ್ಚು ಗೊಂದಲ ಇರುವುದರಿಂದ, ಈಗಿನ ಪರಿಷ್ಕರಣೆಯನ್ನು ಕೈಬಿಟ್ಟು, ಈ ಹಿಂದೆ ರಚನೆಯಾಗಿದ್ದ ಪಠ್ಯಪುಸ್ತಕಗಳನ್ನು ಯಥಾವತ್ತಾಗಿ ಮುಂದುವರೆಸಬೇಕು. ಅಗತ್ಯವಿದ್ದಲ್ಲಿ ಎಲ್ಲಾ ಮೂಲವಾರಸುದಾರರ ಜೊತೆ ವ್ಯಾಪಕ ಚರ್ಚೆ ನಡೆಸುವ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕೆ, ಅಂದರೆ 2023-24 ಕ್ಕೆ ಪಠ್ಯಪುಸ್ತಕ ಪರಿಷ್ಕರಣೆಯನ್ನು ಮುಂದೂಡಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News