ಮಳೆ ಹಾನಿ ಮುನ್ನಚ್ಚರಿಕೆ; ಮುಂದಿನ ವಾರ 4 ಎನ್‌ ಡಿಆರ್‌ ಎಫ್‌ ತಂಡ ರಾಜ್ಯಕ್ಕೆ ಆಗಮನ: ಸಚಿವ ಆರ್.ಅಶೋಕ್

Update: 2022-05-19 15:01 GMT

ಬೆಂಗಳೂರು, ಮೇ 19: ‘ಮುಂಗಾರು ಪೂರ್ವ ಮಳೆಯಿಂದ ರಾಜ್ಯದಲ್ಲಿ 204 ಹೆಕ್ಟೇರ್ ಕೃಷಿ ಹಾಗೂ 431 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟ ಸಂಭವಿಸಿದ್ದು, ರಾಜ್ಯದಲ್ಲಿ 23 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 9 ಜನ ಮೃತಪಟ್ಟಿದ್ದಾರೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಇಂದಿಲ್ಲಿ ಮಾಹಿತಿ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಮುಂದಿನ ವಾರ ರಾಜ್ಯಕ್ಕೆ ಎನ್‍ಡಿಆರ್‍ಎಫ್ ನಾಲ್ಕು ತಂಡಗಳು ಮಳೆ ಹಾನಿ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ಆಗಮಿಸಲಿವೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಕೂಡಲೇ ಪರಿಶೀಲನಾ ಸಭೆ ನಡೆಸಲು ಸೂಚಿಸಲಾಗಿದೆ. ಇನ್ನು ಮೂರ್ನಾಲ್ಕು ತಿಂಗಳು ಕಾರ್ಯಾಚರಣೆ ವೇಗ ಹೆಚ್ಚಿಸಬೇಕು. ಭೂಕುಸಿತ, ನೆರೆ ಬಂದರೂ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ನಿರ್ದೇಶನ ನೀಡಿದರು.

‘ಮನೆಹಾನಿಯಿಂದ ಪ್ರಾಣಹಾನಿ ಸಂಭವಿಸಿದ 48 ಗಂಟೆಯಲ್ಲಿ ಪರಿಹಾರ ನೀಡಬೇಕು. ನಿಯಂತ್ರಣ ಕೊಠಡಿ ಸದಾ ಕ್ರಿಯಾಶೀಲವಾಗಿರಬೇಕು. ಕಾಳಜಿ ಕೇಂದ್ರದಲ್ಲಿ ಇಲಾಖೆ ಸೂಚಿಸಿದ ಪ್ರಕಾರವೇ ಊಟೋಪಚಾರ ವ್ಯವಸ್ಥೆ ಮಾಡಬೇಕು. ಈಗಿನಿಂದಲೇ ಎಲ್ಲ ರೀತಿಯ ರೂಪುರೇಷೆ ಸಿದ್ಧಪಡಿಸಬೇಕು. ಎಲ್ಲೆಲ್ಲಿ ಭೂಕುಸಿತ ಆಗುವ ಸಾಧ್ಯತೆ ಇದೆಯೋ ಅಲ್ಲಿನ ಜನರ ಮನವೊಲಿಸಿ ಖುದ್ದು ಡಿಸಿಗಳೇ ಸ್ಥಳಾಂತರ ಮಾಡಿಸಬೇಕು. ಪ್ರಾಣಹಾನಿ ಆಗದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ ಆಗಬೇಕಿದೆ' ಎಂದು ಅವರು ಸೂಚನೆ ನೀಡಿದರು.

‘ಪ್ರತಿ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಸಲಕರಣೆಗಳೊಂದಿಗೆ ಒಂದು ವಾಹನ ಸದಾ ಸಿದ್ಧವಾಗಿರಬೇಕು. ಇದರಿಂದ ರಸ್ತೆಯಲ್ಲಿ ಮರ ಬಿದ್ದಾಗ ತೆರವುಗೊಳಿಸಲು, ನೆರೆ ಹಾವಳಿ ಉಂಟಾದಾಗ ಕಾರ್ಯಚರಣೆ ನಡೆಸಲು ಅನುಕೂಲ ಆಗುತ್ತದೆ. ಸರ್ಕಾರ ಮಳೆಗಾಲ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಎನ್‍ಡಿಆರ್‍ಎಫ್‍ನ ನಾಲ್ಕು ತಂಡಗಳು ಮುಂಗಾರು ಪೂರ್ವ ಮಳೆ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕೆ ಆಗಮನದ ಒಂದು ವಾರ ಮಂಚೆಯೇ ರಾಜ್ಯಕ್ಕೆ ಆಗಮಿಸಿ, ಕಾರ್ಯಾಚರಣೆಗೆ ಸಿದ್ಧವಾಗಿರುತ್ತದೆ' ಎಂದು ಅಶೋಕ್ ಮಾಹಿತಿ ನೀಡಿದರು.

ಎನ್‍ಡಿಆರ್ ಎಫ್ ತಂಡ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶ, ಎರಡನೆ ತಂಡ ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು,ಮೂರನೇ ತಂಡ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶ ಹಾಗೂ ನಾಲ್ಕನೆ ತಂಡ ರಾಯಚೂರು, ಯಾದಗಿರಿ, ಬಳ್ಳಾರಿ, ಕಲಬುರ್ಗಿ ಹಾಗೂ ಸುತ್ತಮುತ್ತಲಿನ ಪ್ರದೇಶ ಮತ್ತು ಬೆಂಗಳೂರಿನಲ್ಲಿ ಒಂದು ತಂಡ ಕಾರ್ಯಾಚರಣೆಗೆ ಸದಾ ಸಿದ್ಧವಾಗಿರುತ್ತದೆ. ಹೀಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ' ಎಂದರು.

ಎಸ್‍ಟಿಆರ್‍ಎಫ್ ತಂಡಗಳು ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಎಲ್ಲ ಜಿಲ್ಲಾಧಿಕಾರಿಗಳು ಅಗತ್ಯ ಇರುವ ಎಲ್ಲ ಸಾಮಗ್ರಿಗಳನ್ನು ತಕ್ಷಣವೇ ಖರೀದಿ ಮಾಡಬೇಕು. ಬೆಳೆಹಾನಿ ಆದಾಗ ಶೀಘ್ರವಾಗಿ ಪರಿಹಾರ ವಿತರಣೆ ಆಗಬೇಕು. ಈಗಾಗಲೇ ಕೆಲವು ಜಿಲ್ಲೆಯಲ್ಲಿ ಆದ ಬೆಳೆಹಾನಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಅವರು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News