4 ಸಾವಿರ ಕೋಟಿ ಲೂಟಿ, ಗಂಗಾ ಕಲ್ಯಾಣ ಯೋಜನೆಯಲ್ಲೂ ಶೆ.40 ಕಮೀಷನ್: ರಾಜ್ಯ ಸರ್ಕಾರದ ವಿರುದ್ಧ ಎಂ.ಲಕ್ಷ್ಮಣ್ ಆರೋಪ

Update: 2022-05-19 17:40 GMT

ಮೈಸೂರು,ಮೇ.19:  ಗಂಗಾ ಕಲ್ಯಾಣ ಯೋಜನೆಯಡಿ ದಲಿತ ಸಮುದಾಯಕ್ಕೆ ಮೀಸಲಿಟ್ಟಿರುವ ಹಣದಲ್ಲೂ ರಾಜ್ಯದ ಬಿಜೆಪಿ ಸರ್ಕಾರದ ಶೇ. 40 ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆರೋಪಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ವಿವಿಧ ನಿಗಮಗಳ ಮೂಲಕ ಮೀಸಲಿಟ್ಟ 431 ಕೋಟಿ ರೂ.ನಲ್ಲಿ 160 ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಲು 83 ಸಾವಿರ ಖರ್ಚಾದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 1.93 ಲಕ್ಷ ರೂ. ನಿಗದಿಮಾಡಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ನಕಲಿ ಕಾಮಗಾರಿ ಪ್ರಮಾಣ ಪತ್ರ, ನಕಲಿ ಆದಾಯ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

100 ರೂ. ಮೊತ್ತದ ಅರ್ಹತೆ ಇರುವವರಿಗೆ ಸಾವಿರ ರೂ. ಮೊತ್ತದ ಕಾಮಗಾರಿ ನೀಡಿರುವುದೇಕೆ? ಈ ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಈ ಅಕ್ರಮದ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ದೂರು ನೀಡಲಾಗಿದೆ. ಹಾಲಿ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

4 ಸಾವಿರ ಕೋಟಿ ಲೂಟಿ: ಕೊರೊನ ಮೊದಲನೇ ಮತ್ತು ಎರಡನೇ ಅಲೆ ನಿರ್ವಹಣೆಗೆ 8.5 ಸಾವಿರ ಕೋಟಿ ರೂ. ಖರ್ಚು ಮಾಡಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಪ್ರತಿ ಖರೀದಿಯಲ್ಲೂ ಕಮಿಷನ್ ಪಡೆದು 4 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ರಾಜಣ್ಣ ಎಂಬವರು ಆರ್‍ಟಿಐ ಮಾಹಿತಿ ಪಡೆದ ಮಾಹಿತಿಯಲ್ಲಿ ಅಕ್ರಮ ಬಯಲಾಗಿದೆ. 4 ಬೋಗಸ್ ಹೋಟೆಲ್ ಮೂಲಕ ಕಾರ್ಮಿಕರಿಗೆ ಊಟ ಸರಬರಾಜು ಮಾಡಲಾಗಿದೆ ನೂರಾರು ಕೋಟಿ ಕಮಿಷನ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News