ಎಸೆಸೆಲ್ಸಿ ಫಲಿತಾಂಶದಲ್ಲಿ ಬಹುತೇಕ ಮೊದಲೆರಡು ಸ್ಥಾನ ಗಳಿಸುತ್ತಿದ್ದ ಉಡುಪಿ, ದ.ಕ ಜಿಲ್ಲೆಗಳ ಶ್ರೇಣಿ ಈ ಬಾರಿ ಕುಸಿತ !

Update: 2022-05-20 09:09 GMT
ಉಡುಪಿ ಹಿಜಾಬ್‌ ಪ್ರಕರಣದ ಸಂದರ್ಭದ ಚಿತ್ರ (PTI)

ಬೆಂಗಳೂರು: ಗುರುವಾರದಂದು 2021-22ನೇ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದೆ. ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಆದರೆ, ಪ್ರತೀ ವರ್ಷವೂ ಮೊದಲ ಎರಡು ಸ್ಥಾನಗಳನ್ನು ಗಳಿಸುತ್ತಿದ್ದ ʼಬುದ್ಧಿವಂತರ ಜಿಲ್ಲೆʼ ಎಂದೇ ಹೆಸರಾಗಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶ್ರೇಣಿ ಈ ಬಾರಿ ಕುಸಿದಿದೆ. ಈ ರೀತಿಯ ಕುಸಿತಕ್ಕೆ ಜಿಲ್ಲೆಯಲ್ಲಿ ತಿಂಗಳುಗಳ ಹಿಂದೆ ನಡೆದ ಹಿಜಾಬ್, ಕೇಸರಿ ಶಾಲು ಸೇರಿದಂತೆ ಹಲವು ವಿವಾದಗಳನ್ನು ರಾಜಕೀಯಕ್ಕೋಸ್ಕರ ಬಳಸಿದ್ದೇ ಕಾರಣ ಎಂದು ಹಲವರು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಮೊದಲ ಎರಡು ಸ್ಥಾನಗಳು ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ 20ನೇ ಸ್ಥಾನಕ್ಕೆ ಕುಸಿದರೆ, ಉಡುಪಿ ಜಿಲ್ಲೆ 13 ನೇ ಸ್ಥಾನ ಗಳಿಸಿದೆ. ಧಾರ್ಮಿಕ ವಿಚಾರಗಳ ಕುರಿತಂತೆ ಶಿಕ್ಷಣ ಸಂಸ್ಥೆಯಲ್ಲೂ ರಾಜಕೀಯ ಹಸ್ತಕ್ಷೇಪಗಳಿಗೆ ಅವಕಾಶ ನೀಡದಿದ್ದರೆ ಇಂತಹಾ ಪ್ರದರ್ಶನಕ್ಕೆ ಗುರಿಯಾಗುತ್ತಿರಲಿಲ್ಲ ಎಂದು ಹಲವರು ಅಭಿಪ್ರಾಯಿಸಿದ್ದಾರೆ. 

ಧರ್ಮ ರಕ್ಷಣೆಯ ಹೆಸರಿನಲ್ಲಿ ಶಿಕ್ಷಣವನ್ನು ಮೂಲೆಗುಂಪಾಗಿಸಿದ ಒಂದು ಕಾಲದ ಬುದ್ಧಿವಂತರ ಜಿಲ್ಲೆ. ಸದಾ ಮೊದಲಿನ ಎರಡು ಸ್ಥಾನದಲ್ಲಿ ಇರುತ್ತಿದ್ದ ನಮ್ಮ ಉಡುಪಿ ಜಿಲ್ಲೆ ಇಂದು 13ನೇ ಸ್ಥಾನಕ್ಕೆ ಬಂದಿದೆ. ಶಬಾಷ್ ಈ ಸಾಧನೆಗೆ. ಬನ್ನಿ ನನ್ನ ಹಿಂದೂ ವಿದ್ಯಾರ್ಥಿ ಮಿತ್ರರೇ ಹಿಜಾಬ್ ವಿರುದ್ಧ ಹೋರಾಡೋಣ ಧರ್ಮ ರಕ್ಷಣೆ ಮಾಡೋಣ ಶಿಕ್ಷಣ ಸೋತರೆ ಸೋಲಲಿ ನಮಗೆ ಗುಲಾಮರಾಗಿದ್ದು ಅಭ್ಯಾಸ... ಜೈ ಶ್ರೀ ರಾಮ್" ಎಂದು ಗಜುಸಂಕೇತ್‌ ಪಿ ರಾವ್‌ ಎಂಬವರು ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಮೊದಲೆಲ್ಲಾ ಉಡುಪಿ, ದ.ಕನ್ನಡ ಚಿಕ್ಕಮಗಳೂರು ಜಿಲ್ಲೆಗಳನ್ನು ಮೊದಲಿನಿಂದ ಹುಡುಕಬೇಕಿತ್ತು, ಈಗ ಮದ್ಯದಲ್ಲಿ ಹುಡುಕಬೇಕಿದೆ. ಧರ್ಮದ ಅಮಲು ವಿದ್ಯಾರ್ಥಿಗಳ ಭವಿಷ್ಯವನ್ನು ನಿಧಾನವಾಗಿ ಕಿತ್ತುಕೊಳ್ಳುತ್ತಿದೆ. ಇದೆರ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿಕೊನೆಯಿಂದ ಹುಡುಕುವ ಪರಿಸ್ಥಿತಿ ಬರಬಹುದು. ಶಿವಮೊಗ್ಗ ಅಂತೂ ಕೊನೆಯಿಂದ ಹುಡುಕಬೇಕಿದೆ." ಎಂದು ನಿಶಾಂತ್‌ ಮಂಡಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

"ಬುದ್ಧಿವಂತರ ಜಿಲ್ಲೆ ಕೋಮುವಾದದ ಜಿಲ್ಲೆಯಾಗಿ ಮಾರ್ಪಾಡಾಗುತ್ತಿರುವುದು ಆತಂಕದ ಸಂಗತಿ. ಧರ್ಮ ದ್ವೇಷಗಳು ಶಾಲೆಗಳಿಗೆ ತಲುಪಿದ ಪರಿಣಾಮ ನಾವು ಕಾಣುತ್ತಿದ್ದೇವೆ" ಎಂಬರ್ಥದಲ್ಲಿ ಹಲವರು ಫೇಸ್‌ಬುಕ್‌ ಪೋಸ್ಟ್‌ ಮೂಲಕ ಅಭಿಪ್ರಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News