ಬೆಂಗಳೂರು ವಿಮಾನಿಲ್ದಾಣಕ್ಕೆ ಹುಸಿ ʼಬಾಂಬ್‌ʼ ಕರೆ: ಆರೋಪಿ ಸುಭಾಶಿಶ್‌ ಗುಪ್ತಾ ಬಂಧನ

Update: 2022-05-20 13:49 GMT

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಬಗ್ಗೆ ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಶುಕ್ರವಾರ ಕೆಲ ಗಂಟೆಗಳ ಅಂತರದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇದು ಪ್ರಯಾಣಿಕರಲ್ಲಿ ಭೀತಿಯನ್ನು ಉಂಟುಮಾಡಿತ್ತು ಎಂದು Thenewsminute ವರದಿ ಮಾಡಿದೆ.

ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಪೊಲೀಸ್ ಕಂಟ್ರೋಲ್ ರೂಂಗೆ ಒಬ್ಬ ವ್ಯಕ್ತಿಯಿಂದ ಕರೆ ಬಂದಿದ್ದು, ತನ್ನನ್ನು ತಾನು ʼದೀಪಕ್ʼ ಎಂದು ಗುರುತಿಸಿಕೊಂಡಿದ್ದ ಎಂದು Thehindu ವರದಿ ಮಾಡಿದೆ. ಶುಕ್ರವಾರ ಬೆಳಗಿನ ಜಾವ 3.50ಕ್ಕೆ ವಿಮಾನ ನಿಲ್ದಾಣದಲ್ಲಿ ಟೈಮ್ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಕರೆ ಮಾಡಿದ ವೇಳೆ ಆತ ಹೇಳಿಕೊಂಡಿದ್ದ ಎನ್ನಲಾಗಿದೆ.

"ಇಂದು ಮುಂಜಾನೆ [ಶುಕ್ರವಾರ], ನಿಯಂತ್ರಣ ಕೊಠಡಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ" ಎಂದು ಈಶಾನ್ಯ ಪೊಲೀಸ್ ಉಪ ಆಯುಕ್ತ ಅನೂಪ್ ಶೆಟ್ಟಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಕೂಡಲೇ ಈ ಕುರಿತು ಎಚ್ಚರಿಕೆ ನೀಡಲಾಯಿತು. ನಂತರ ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್‌ಗಳು ಹಾಗೂ ಶ್ವಾನ ದಳಗಳು ಕೈಬಿಟ್ಟ ಬ್ಯಾಗ್‌ಗಳು ಅಥವಾ ಸರಕುಗಳಿಗಾಗಿ ವಿಮಾನ ನಿಲ್ದಾಣದಲ್ಲಿ ಹುಡುಕಾಟ ನಡೆಸಿದವು ಎಂದು Thehindu ವರದಿ ಮಾಡಿದೆ.

ಬೆಳಗ್ಗೆ 7 ಗಂಟೆಯ ಸುಮಾರಿಗೆ ಅಧಿಕಾರಿಗಳು ಈ ಕರೆಯನ್ನು 'ಸುಳ್ಳು' ಎಂದು ಘೋಷಿಸಿದರು.

ಕರೆ ಮಾಡಿದ ವ್ಯಕ್ತಿಯನ್ನು ಸುಭಾಶಿಶ್ ಗುಪ್ತಾ ಎಂದು ಗುರುತಿಸಲಾಗಿದೆ. ತನ್ನ ಸೋದರ ಮಾವನ ವಿರುದ್ಧ ಸೇಡಿನ ಕ್ರಮವಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾಗಿ ಎಂದು Thenewsminute ವರದಿ ಮಾಡಿದೆ. ತನ್ನ ಸಹೋದರಿಗೆ ವಿಚ್ಛೇದನ ನೀಡಿದ್ದಕ್ಕಾಗಿ ಆತನನ್ನು ಶಿಕ್ಷಿಸಲು ತನ್ನ ಸೋದರ ಮಾವನ ಹೆಸರಿನಲ್ಲಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಗುಪ್ತಾ ತನ್ನದೇ ಸೆಲ್‌ಫೋನ್‌ನಿಂದ ಕರೆ ಮಾಡಿದ್ದು, ಇದು ನಗರದ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿನ ಪೇಯಿಂಗ್ ಗೆಸ್ಟ್ ವಸತಿ ಸ್ಥಳಕ್ಕೆ ಪೊಲೀಸರನ್ನು ತಲುಪಿಸಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News