ಗಾಳಿ- ಮಳೆ: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 4152 ವಿದ್ಯುತ್ ಕಂಬಗಳಿಗೆ ಹಾನಿ

Update: 2022-05-20 12:08 GMT

ಬೆಂಗಳೂರು:  ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಕಳೆದ ಎರಡು ವಾರಗಳಲ್ಲಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 4152 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 261 ವಿದ್ಯುತ್ ಪರಿವರ್ತಕಗಳು ಮತ್ತು 128 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಗೊಳಗಾಗಿವೆ. 

ಸತತ ಸುರಿಯುತ್ತಿರುವ ಮಳೆಗೆ ವಿದ್ಯುತ್ ಕಂಬಗಳು ಮುರಿದಿದ್ದು, ದುರಸ್ಥಿ ಪಡಿಸಲಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.  ಮುರಿದಿರುವ ವಿದ್ಯುತ್ ಕಂಬಗಳನ್ನು ಬದಲಿಸಲಾಗಿದ್ದು, ಹಾನಿಯ ಅಂದಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮೇ 17ರಂದು ಸುರಿದ ಭಾರೀ ಮಳೆಗೆ ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 312 ಕಂಬಗಳು ಮುರಿದ್ದಿದ್ದು, 27 ಟಿಸಿಗಳು ಮತ್ತು 10 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಗೊಳಗಾಗಿವೆ. ಮೇ 18 ರಂದು, 82 ವಿದ್ಯುತ್ ಕಂಬಗಳು, 5 ಟಿಸಿ ಮತ್ತು 6  ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಯಾಗಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. 

ಜತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 107 ಫೀಡರ್ ಗಳು ತೊಂದರೆಗೊಳಗಾಗಿದ್ದು ಎಲ್ಲವನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸಬ್ ಸ್ಟೇಷನ್ ಮುಳುಗಡೆ:  ಭಾರೀ ಮಳೆಗೆ ಮೇ 17 ರಂದು ಬೆಂಗಳೂರಿನ ನಾಗವಾರ ಸಮೀಪದ ಗೆದ್ದಲಹಳ್ಳಿ ಯಲ್ಲಿರುವ 66/11 ಕೆವಿ   ಸಬ್ ಸ್ಟೇಷನ್ ನೀರಿನಲ್ಲಿ ಮುಳುಗಿತ್ತು, ಶಿವಾಜಿನಗರ ಬೆಸ್ಕಾಂ ವಿಭಾಗದ ಸಿಬ್ಬಂದಿ ರಾತ್ತಿ 12 ಗಂಟೆಗೆ ಜೆಸಿಬಿ ಸಹಾಯದಿಂದ ಕೆಪಿಟಿಸಿಎಲ್ ಕಂಪೌಂಡ್ ಗೋಡೆ ಒಡೆದು ಸುಮಾರು ಒಂದು ಕಿ.ಮೀ ದೂರದ ವರೆಗೆ ಪಕ್ಕದ ಜಮೀನಿನಲ್ಲಿ ಕಾಲುವೆ ಮಾಡಿ, ನೀರು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. 

ಇದರಿಂದಾಗಿ ವಡ್ಡರಪಾಳ್ಳ, ರಾಜಣ್ಣ ಬಡಾವಣೆ, ಗದ್ದಲಹಳ್ಳಿ, ಬೈರತಿ ಸುತ್ತಲಿನ ಪ್ರದೇಶದ ಸುಮಾರು 28,000 ಗ್ರಾಹಕರಿಗೆ  ಮಂಗಳವಾರ (ಮೇ 17) ರಾತ್ರಿ 3 ಗಂಟೆ ವೇಳೆಗೆ ವಿದ್ಯುತ್ ಪೂರೈಸಲಾಗಿದೆ ಎಂದು ಶಿವಾಜಿನಗರ  ವಿಭಾಗದ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

ಗೆದ್ದಲಹಳ್ಳಿ ಸಬ್ ಸ್ಟೇಷನ್   ಭಾರೀ ಮಳೆಗೆ ಸೆಪ್ಟೆಂಬರ್, 2020 ರಲ್ಲಿ ಕೂಡ ಮುಳುಗಡೆ ಆಗಿತ್ತು, ಆದರೆ  ಆ ಸಂದರ್ಭದಲ್ಲಿ ಪಂಪ್ ಸೆಟ್ ಬಳಸಿ ನೀರು ಹೊರಹಾಕಿ, ವಿದ್ಯುತ್ ಸಂಪರ್ಕ ಸರಿಪಡಿಸಲು 15 ಗಂಟೆಗಳು ಹೆಚ್ಚು ಕಾಲ ತಗಲಿತ್ತು ಎಂದು ಬೆಸ್ಕಾಂ ಶಿವಾಜಿನಗರ ವಿಭಾಗದ ಅಧಿಕಾರಿಗಳು ಸ್ಮರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News