2023ರ ಚುನಾವಣೆಯಲ್ಲಿ 150 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಎಂ.ಬಿ.ಪಾಟೀಲ್

Update: 2022-05-20 12:24 GMT

ಚಿಕ್ಕಮಗಳೂರು, ಮೇ 20: ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು.

ಬಸವತತ್ವ ಸಮಾವೇಶದಲ್ಲಿ ಭಾಗವಹಿಸಲು ಗುರುವಾರ ಸಂಜೆ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 70 ವರ್ಷಗಳಲ್ಲಿ ಮಾಡಿದ್ದ ಸಾಧನೆಗಳನ್ನು ಹೇಳಲು 70 ದಿನಗಳು ಸಾಕಾಗುವುದಿಲ್ಲ. ಮೋದಿ ನೇತೃತ್ವದ ಬಿಜೆಪಿ ಸರಕಾರ 2014ರಿಂದ ದೇಶದ ಜನರಿಗೆ ದೊಡ್ಡ ಬದಲಾವಣೆ ತರುವ ಕನಸನ್ನು ಬಿತ್ತಿದ್ದು, ಎಲ್ಲರ ಖಾತೆಗೆ 15 ಲಕ್ಷ ರೂ. ಜಮೆ ಮಾಡುತ್ತೇವೆ, 5 ವರ್ಷಗಳಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಭರವಸೆ ನೀಡಿದ್ದರು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನವಿರೋಧಿ ಆಡಳಿತ ನೀಡುವ ಮೂಲಕ ದೇಶವನ್ನು ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದರು.

ಮೋದಿ ಆಡಳಿತದ ಪರಿಣಾಮ ದೇಶಾದ್ಯಂತ ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಕಬ್ಬಿಣ, ಸಿಮೆಂಟು, ಅಡುಗೆ ಎಣ್ಣೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಚ್ಚೇದಿನ್ ಬರುತ್ತೆ ಎಂದು ಬೊಗಳೆ ಬಿಟ್ಟರು, ಆದರೆ ಬಿಜೆಪಿ ಪಕ್ಷದ ವರಿಷ್ಠರು, ಮಂತ್ರಿಗಳು, ಶಾಸಕರಿಗೆ ಅಚ್ಚೇದಿನ್ ಬಂತೇ ಹೊರತು ದೇಶದ ಜನರಿಗೆ ಇದ್ದ ಅಚ್ಚೇದಿನ್ ಕೂಡ ಹೊರಟು ಹೋಗಿದೆ ಎಂದು ವ್ಯಂಗ್ಯವಾಡಿದ ಅವರು, ಕೆಲ ನಿರ್ದಿಷ್ಟ ಧರ್ಮದವರನ್ನು ಗುರಿ ಮಾಡಿ ಅನ್ಯಾಯ ಮಾಡುತ್ತಿದ್ದಾರೆ. ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟ ಇಂದು ಉಳಿದಿಲ್ಲ. ಎಲ್ಲವನ್ನು ಹಾಳುಗೆಡವಲಾಗಿದೆ. ಕರ್ನಾಟಕ ರಾಜ್ಯ ಮತ್ತೆ ಶಾಂತಿಯ ತೋಟವಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

2013ರಿಂದ 2018ವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿದ್ದ 169 ಭರವಸೆಗಳಲ್ಲಿ 165ನ್ನು ಈಡೇರಿಸಿದ್ದೆವು. ಆದರೆ ನರೇಂದ್ರ ಮೋದಿ ಅವರು ನೀಡಿದ ಯಾವುದೇ ಭರವಸೆಗಳೂ ಈಡೇರಿಲ್ಲ. ಸದ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಸರಕಾರದ ಸಾಧನೆ ಎಲ್ಲ ರಂಗದಲ್ಲೂ ವೈಫಲ್ಯ ಕಂಡಿದೆ, ರಾಜ್ಯದಲ್ಲಿ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಬಡವರ ಪರ ಒಂದೇ ಒಂದು ಯೋಜನೆ ಜಾರಿ ಮಾಡಿಲ್ಲ. ಎಲ್ಲಾ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮೀಷನ್ ಪಡೆಯುವ ದಂಧೆ ನಡೆಯುತ್ತಿದೆ. ಹೀಗಿರುವಾಗ ಬಿಜೆಪಿ ಸರಕಾರಗಳಿಂದ ಅಭಿವೃದ್ಧಿಯನ್ನು ನಿರೀಕ್ಷೆ ಮಾಡುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ವಿಧಾನಪರಿಷತ್ ಮಾಜಿ ಸದಸ್ಯೆ, ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಮಂಜೇಗೌಡ, ಎಚ್.ಎಚ್.ದೇವರಾಜ್, ಹಿರೇಮಗಳೂರು ಪುಟ್ಟಸ್ವಾಮಿ, ಎಂ.ಸಿ.ಶಿವಾನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News