ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆ; ಅಭ್ಯರ್ಥಿ ಆಯ್ಕೆ ಚರ್ಚೆಗೆ ಹೈಕಮಾಂಡ್‌ ಬುಲಾವ್‌: ಸಿದ್ದರಾಮಯ್ಯ

Update: 2022-05-20 17:24 GMT

ಕಲಬುರಗಿ: ‘ರಾಜ್ಯಸಭೆ  ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚಿಸಲು ಹೈಕಮಾಂಡ್ ಬುಲಾವ್‌ ನೀಡಿದೆ. ಶನಿವಾರ (ಮೇ 21) ನಾನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಲಿದ್ದೇವೆ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಯಚೂರಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಚ್ಚುವರಿ ಮತಗಳ ಚಲಾವಣೆಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಅಥವಾ ಬೇರೆ ಏನು ಮಾಡಬಹುದು ಎಂಬ ಬಗ್ಗೆಯೂ ಚರ್ಚೆ ನಡೆಸಿ ನಿರ್ಧರಿಸುತ್ತೇವೆ’ ಎಂದು ಅವರು ತಿಳಿಸಿದರು. 

‘ಮಳೆಯಿಂದಾಗಿ ಬೆಂಗಳೂರು ಅನುಭವಿಸುತ್ತಿರುವ ಬವಣೆಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರಣ. ಮಳೆ ವಿಚಾರದಲ್ಲಿ ಮೂರುಕಾಸಿನ ಮುಂಜಾಗ್ರತೆಯೂ ಈ ಸರ್ಕಾರಕ್ಕೆ ಇಲ್ಲ. ಜನವರಿಯಲ್ಲಿ ಪೂರ್ವಸಿದ್ಧತೆ ಮಾಡಿಕೊಂಡು, ಸಮಸ್ಯೆಯಾಗದಂತೆ ಕ್ರಮ ವಹಿಸಬೇಕಿತ್ತು. ಈಗ ಮಳೆ ಶುರುವಾದ ಮೇಲೆ ಪರಿಹಾರ ಘೋಷಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ  1500 ಕೋಟಿ ರೂ. ಘೋಷಿಸಿದ್ದರು. ಒಂದು ಪೈಸೆ ಕೂಡ ಕೊಡಲಿಲ್ಲ. ಈಗ ಬೊಮ್ಮಾಯಿ ಅವರು ಮತ್ತೆ  1600 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಇಂಥ ಭರವಸೆಗಳಿಂದ ಬೆಂಗಳೂರಿನ ಜನರ ಸಂಕಷ್ಟ ದೂರಾಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News