ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ: 9 ಮಂದಿ ಮೃತ್ಯು

Update: 2022-05-21 17:08 GMT

ಧಾರವಾಡ/ಬೆಂಗಳೂರು, ಮೇ 21: ಟೆಂಪೋಟ್ರಾಕ್ಸ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಜರುಗಿದೆ.

ತಾಲೂಕಿನ ಬಾಡಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಅನನ್ಯಾ(14), ಹರೀಶ್(13), ಶಿಲ್ಪಾ(34), ನಿಲವ್ವ(60), ಮಧುಶ್ರೀ(20), ಮಹೇಶ್ವರ(11), ಶಂಭುಲಿಂಗಯ್ಯ(35), ಚೆನ್ನವ್ವ(45) ಮತ್ತು ಬಸವರಾಜ ದಾಸನಕೊಪ್ಪ(16) ಎಂದು ಗುರುತಿಸಲಾಗಿದೆ.
ಮನಸೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ಶನಿವಾರ ಮುಂಜಾನೆ 2ಗಂಟೆ ಸುಮಾರಿಗೆ ಬೆನಕನಕಟ್ಟಿಗೆ ಮರಳುತ್ತಿದ್ದರು. 21 ಜನರಿದ್ದ ವಾಹನ ನಿಗದಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ.

ಇದರ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಇದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ತಲೆಗೆ ತೀವ್ರ ಪೆಟ್ಟು ಬಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐದು ವರ್ಷದ ಆರಾಧ್ಯ ಮತ್ತು 13 ವರ್ಷದ ಮುತ್ತು ಮರಿಗೌಡರ ಗಂಭೀರವಾಗಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡಿದ್ದ ಉಳಿದ ಒಂಬತ್ತು ಮಂದಿಗೆ ತುರ್ತು ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ವಾರ್ಡ್‍ನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆಕ್ರಂದನ: ಗ್ರಾಮಕ್ಕೆ ಮೃತದೇಹಗಳು ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹ ಕಂಡ ಸಂಬಂಧಿಕರ ಕಣ್ಣಾಲೆಗಳು ಒದ್ದೆಯಾಗಿದ್ದವು. ಬೆನಕನಕಟ್ಟಿ ಗ್ರಾಮದ ಶಂಭುಲಿಂಗಯ್ಯ ಹಿರೇಮಠ ಅವರ ಅಂತಿಮ ಕಾರ್ಯವನ್ನು ಬೆನಕನಕಟ್ಟಿ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಚಿತೆಯಲ್ಲಿ ಮೂವರ ಅಂತ್ಯಕ್ರಿಯೆ ಮಾಡಲಾಗಿದೆ. ನಿಗದಿ ಗ್ರಾಮದ ಮಧುಶ್ರೀ, ಶಿಲ್ಪಾ ಮತ್ತು ಹರೀಶ್ ಎಂಬ ಮೂವರ ಅಂತ್ಯಕ್ರಿಯೆಯನ್ನು ಒಂದೇ ಚಿತೆಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News