ವಿದುರಾಶ್ವತ್ಥ ಸ್ವಾತಂತ್ರ್ಯ ಸ್ಮಾರಕದ ಮೇಲೆ ಸಂಘಪರಿವಾರದಿಂದ ದಾಳಿ; ಪೊಲೀಸರಿಗೆ ದೂರು ನೀಡಿದ ಆಡಳಿತ ಮಂಡಳಿ

Update: 2022-05-21 08:33 GMT

ಗೌರಿಬಿದನೂರು : ತಾಲ್ಲೂಕಿನ ವಿದುರಾಶ್ವತ್ಥ ಸ್ವಾತಂತ್ರ್ಯ ಸ್ಮಾರಕದ  ಫೋಟೊ ಗ್ಯಾಲರಿಯ ಮೇಲೆ ಆರೆಸ್ಸೆಸ್, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ದಾಳಿ ಮಾಡಿರುವುದಾಗಿ ಪೊಲೀಸರಿಗೆ ಆಡಳಿತ ಮಂಡಳಿ ದೂರು ನೀಡಿದೆ.

ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥವನ್ನು ಕರ್ನಾಟಕ ಜಲಿಯನ್ ವಾಲಾಬಾಗ್ ಎಂದೇ ಕರೆಯಲಾಗುತ್ತದೆ. 1938ರಲ್ಲಿ ನಡೆದ ಧ್ವಜ ಸತ್ಯಾಗ್ರಹ ಸಂದರ್ಭ ಗೋಲಿಬಾರ್ ನಡೆದು ಸುಮಾರು 32 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಇಲ್ಲಿ ಒಂದು ಸ್ಮಾರಕ ನಿರ್ಮಾಣಗೊಂಡಿದ್ದು, ಇದರ ಭಾಗವಾಗಿ ಸಮಗ್ರ ಭಾರತ ಸ್ವಾತಂತ್ರ್ಯವನ್ನು ಬಿಂಬಿಸುವ ಒಂದು ಬೃಹತ್ ಫೋಟೊ ಗ್ಯಾಲರಿಯನ್ನು 2009ರಲ್ಲಿ ನಿರ್ಮಾಣ ಮಾಡಲಾಗಿದೆ.

ಅಂದಿನಿಂದ ಇಂದಿನವರೆಗೆ ಸಾವಿರಾರು ಪ್ರೇಕ್ಷಕರು ಈ ಗ್ಯಾಲರಿಗೆ ಭೇಟಿ ನೀಡಿ ಮುಕ್ತ ಕಂಠದಿಂದ ನಮ್ಮ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಅವರಲ್ಲಿ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು,  ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರುಗಳು, ರಾಜ್ಯಪಾಲರು, ಸರ್ಕಾರದ ಉನ್ನತ ಅಧಿಕಾರಿಗಳು, ವಿವಿಗಳ ಉಪಕುಲಪತಿಗಳು, ಪ್ರಾಧ್ಯಾಪಕರುಗಳು, ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದ್ದಾರೆ.

ಜಾತಿ, ವರ್ಗ, ಧರ್ಮ ಭೇದವಿಲ್ಲದೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಗಳಾದ ಸಮಸ್ತ ಭಾರತೀಯರ ಕೊಡುಗೆಯನ್ನು ವಿಶಾಲ ತಳಹದಿಯ ಮೇಲೆ  ಬಿಂಬಿಸುವ ಪ್ರಯತ್ನವು ನಮ್ಮದಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಕಂಡುಬರುತ್ತಿರುವ ಧಾರ್ಮಿಕ ಸಂಘರ್ಷಗಳ ಮುಂದುವರಿದ ಭಾಗವೆಂಬಂತೆ ಆರೆಸ್ಸೆಸ್, ಭಜರಂಗದಳ ಮುಂತಾದ ಹಿಂದುತ್ವ ಸಂಘಟನೆಗಳು ತಮ್ಮ ಸಿದ್ಧಾಂತಕ್ಕೆ ಒಪ್ಪಿಗೆಯಾಗದ ಕೆಲವು ಚಿತ್ರಪಟಗಳನ್ನು ಗ್ಯಾಲರಿಯಿಂದ ತೆಗೆದು ಹಾಕುವಂತೆ ಒತ್ತಾಯಿಸಿ ಕಳೆದ 20 ದಿನಗಳಿಂದ ನಾಲ್ಕು ಬಾರಿ ಗ್ಯಾಲರಿಗೆ ನುಗ್ಗಿ ದಾಳಿ ನಡೆಸಿದ್ದಾರೆ. ತಮ್ಮ ಸಲಹೆಯ ಮೇರೆಗೆ ಕೂಡಲೇ ಅವನ್ನು ಸರಿಪಡಿಸದಿದ್ದಲ್ಲಿ ತಮ್ಮ ದಾಳಿಯು ಯಾವ ಹಂತಕ್ಕೆ ಬೇಕಾದರೂ ತಲುಪಬಹುದು ಎಂದು ಗುಂಪುಗಳಲ್ಲಿ ಬಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಲಾಗಿದೆ.

ಕರ್ನಾಟಕದ ಎಲ್ಲ ಶಾಂತಿಪ್ರಿಯ ದೇಶಪ್ರೇಮಿಗಳು ಮುಂಚೂಣಿಯಲ್ಲಿ ನಿಂತು ಈ ಸ್ಮಾರಕದ ಅಪರೂಪದ ಗ್ಯಾಲರಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕೈಜೋಡಿಸಬೇಕೆಂದು ಕೋರಲಾಗಿದೆ ಎಂದು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News