ಮಾನವೀಯತೆಯನ್ನು ಚಿರಾಯುಗೊಳಿಸೋಣ: ಶ್ರೀ ಶಿವರುದ್ರ ಸ್ವಾಮಿ

Update: 2022-05-21 12:10 GMT

ಬೆಂಗಳೂರು: ಈ ಜಗತ್ತಿನಲ್ಲಿ ನಮ್ಮ ಸ್ವಾರ್ಥಕ್ಕಾಗಿ ಧರ್ಮದ ಮುಖವಾಡ ಹಾಕಿಕೊಂಡು ಬೇಕಾದಷ್ಟು ಘಟನೆಗಳು ನಡೆಯುತ್ತಿವೆ. ಆದರೆ, ಅವುಗಳನ್ನೆಲ್ಲ ಮೆಟ್ಟಿ ನಿಂತು ನಾವು ಮಾನವೀಯತೆಯನ್ನು ಚಿರಾಯುಗೊಳಿಸಬೇಕಾದ ಅಗತ್ಯವಿದೆ ಎಂದು ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿ ಕರೆ ನೀಡಿದರು.

ಶನಿವಾರ ಇಂದಿರಾನಗರದ ಮಸ್ಜಿದೆ ಉಮ್ಮುಲ್ ಹಸ್ನೈನ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ಮತೀಯ ಸೌಹಾರ್ದತೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾವೆಲ್ಲ ಒಗ್ಗಟ್ಟಾಗಿ, ಇನ್ಸಾನಿಯತ್(ಮಾನವೀಯತೆ) ಅನ್ನು ಉಳಿಸಿಕೊಂಡು ಶೈತಾನಿಯತ್(ದುಷ್ಟ ಚಿಂತನೆ)ಅನ್ನು ಧಿಕ್ಕರಿಸೋಣ ಎಂದು ಕರೆ ನೀಡಿದರು.

ನಮ್ಮ ಮನಸ್ಸಿನ ಶಕ್ತಿಯನ್ನು ಪರೀಕ್ಷಿಸಲು ದೇವರು ನಕಾರಾತ್ಮಕವಾದ ಶಕ್ತಿಗಳನ್ನು ನಮ್ಮ ಮುಂದೆ ಇಟ್ಟಿದ್ದಾನೆ. ನಿನ್ನ ಬಲದಿಂದ ಈ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ಗೆಲ್ಲುವ ಶಕ್ತಿಯನ್ನು ನನಗೆ ಕೊಡು ಎಂದು ನಾವು ದೇವರಲ್ಲಿ ಪ್ರಾರ್ಥಿಸೋಣ. ನಿನ್ನ ಅನುಯಾಯಿಗಳು ನಾವು, ಪ್ರವಾದಿ ಮುಹಮ್ಮದ್(ಸ) ಅವರ ಹೆಜ್ಜೆಯ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟುಕೊಂಡು ನಾವು ನಿನ್ನ ಬಳಿ ಬರುತ್ತೇವೆ ಎಂದು ಪ್ರಾರ್ಥಿಸಬೇಕು ಎಂದು ಶಿವರುದ್ರ ಸ್ವಾಮಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದ್ರಸಾ-ಎ-ಇಸ್ಲಾಹುಲ್ ಬನಾತ್‍ನ ಮುಖ್ಯಸ್ಥ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ಸಮುದಾಯಗಳನ್ನು ಒಗ್ಗೂಡಿಸುವ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತಿರೋಣ. ಸಮುದಾಯಗಳನ್ನು ವಿಭಜಿಸಲು ನಡೆಯುವ ಪ್ರಯತ್ನಗಳು ಖಂಡಿತ ವಿಫಲವಾಗುತ್ತವೆ. ಒಂದಲ್ಲ ಒಂದು ದಿನ ನಮ್ಮ ಸಮಾಜ ಮೊದಲಿನಂತೆ ‘ಪ್ರೀತಿ, ಸೌಹಾರ್ದತೆ, ಮಾನವೀಯತೆ, ಶಾಂತಿ, ಪರಸ್ಪರ ಗೌರವ’ವನ್ನು ಹೊಂದಿರುವಂತಹ ಎಲ್ಲ ಬಗೆಯ ಹೂವುಗಳನ್ನು ಒಳಗೊಂಡ ಗುಚ್ಛವಾಗಿ ಕಂಗೊಳಿಸಲಿದೆ ಎಂದರು.

‘ಮಾನವರಲ್ಲಿ ಉತ್ತಮ ಮಾನವ ಯಾರೆಂದರೆ ಮತ್ತೊಬ್ಬರ ಒಳಿತನ್ನು ಬಯಸುವವನು’ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ನಮ್ಮನ್ನು ಜನಸಾಮಾನ್ಯರ ಒಳಿತಿನ ಕಾರಣಕ್ಕಾಗಿಯೆ ಈ ಜಗತ್ತಿಗೆ ಕಳುಹಿಸಿಕೊಡಲಾಗಿದೆ. ಎಲ್ಲಿಯವರೆಗೆ ನಾವು ಆ ಕಾರ್ಯವನ್ನು ಮಾಡುತ್ತಿರುತ್ತೇವೋ, ಅಲ್ಲಿಯವರೆಗೆ ನಾವು ಅಲ್ಲಾಹ್‍ನ ದೃಷ್ಟಿಯಲ್ಲಿ ಉತ್ತಮವಾಗಿರುತ್ತೇವೆ. ನಮ್ಮ ದೇಶದಲ್ಲಿ ಇತ್ತೀಚೆಗೆ ಪರಿಸ್ಥಿತಿ ತುಂಬಾ ಕೆಡುತ್ತಿದೆ. ವಾತಾವರಣವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಾವು ಶ್ರಮಿಸೋಣ ಎಂದು ಅವರು ಹೇಳಿದರು.

ಕ್ರೈಸ್ತ ಧಾರ್ಮಿಕ ಗುರು ಜೋಸೆಫ್ ರೋಯಾನ್ ಮಾತನಾಡಿ, ಭಾರತದ ಸಂಸ್ಕೃತಿ ಅತಿಥಿ ದೇವೊಭವ ಎಂಬುದು. ಈ ನಾಡಿನಲ್ಲಿ ಸರ್ವಧರ್ಮಗಳಿಗೂ ಮಾನ್ಯತೆ ಇದೆ. ಶಾಂತಿ, ಸೌಹಾರ್ದತೆಯ ವಾತಾವರಣ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ದುಷ್ಟ ಶಕ್ತಿಗಳು ಇಲ್ಲಿನ ಶಾಂತ ವಾತಾವರಣವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ. ಸರ್ವಧರ್ಮಗಳ ಸಾರವು ಶಾಂತಿ, ಸೌಹಾರ್ದತೆ ಆಗಿದೆ. ನಾವು ಶಾಂತಿ, ಸೌಹಾರ್ದತೆಯನ್ನು ಕಾಪಾಡೋಣ, ಮಾನವೀಯತೆಯನ್ನು ಉಳಿಸೋಣ. ಮಾನವೀಯತೆ ಉಳಿದರೆ ಮಾತ್ರ ನಾವು ಮನುಷ್ಯರಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು.

ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಲಹೆಗಾರ ಬಲ್ಜೀತ್ ಸಿಂಗ್ ಮಾತನಾಡಿ, ದ್ವೇಷ ಸಮಾಜವನ್ನು ನಾಶ ಮಾಡುತ್ತದೆ. ಕೆಲವು ಶಕ್ತಿಗಳು ದ್ವೇಷದಿಂದ ಸಮುದಾಯಗಳನ್ನು ನಾಶ ಮಾಡುತ್ತೇವೆ ಎಂದು ಹೊರಟಿವೆ. ಆದರೆ, ಸಮುದಾಯಗಳು ನಾಶವಾಗುವುದಿಲ್ಲ. ಬದಲಾಗಿ, ಸಮುದಾಯಗಳನ್ನು ನಾಶ ಮಾಡುತ್ತೇವೆ ಎಂದು ಹೊರಟಿರುವ ಶಕ್ತಿಗಳೆ ನಾಶವಾಗುತ್ತವೆ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಅಧ್ಯಕ್ಷ ಆರ್.ಕಿರಣ್ ಕುಮಾರ್, ಸಿವಿ ರಾಮನ್ ನಗರ ಕಸಾಪ ಮಾಜಿ ಅಧ್ಯಕ್ಷ ಮುಹಮ್ಮದ್ ಮುನಾಫ್, ಮಸ್ಜಿದೆ ಉಮ್ಮುಲ್ ಹಸ್ನೈನ್ ಸಮಿತಿ ಅಧ್ಯಕ್ಷ ಝಿಯಾಉಲ್ಲಾ ಖಾನ್, ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಮ್ ಶಫೀಕ್, ಗಜಸೇನಾ ಫೌಂಡೇಶನ್ ಅಧ್ಯಕ್ಷ ಗಜೇಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News