ಮೋದಿ ಮಾಡಿರುವ ಕೆಲಸ ದೇಶದ ಜನರಿಗೆ ಗೊತ್ತೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2022-05-21 12:17 GMT
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಮೇ 21: `ರಾಜೀವ್ ಗಾಂಧಿ ಯುವಕರಲ್ಲಿ ಚೈತನ್ಯ ಮೂಡಿಸಿದ ಮಹಾನ್ ನಾಯಕ. ಅವರು ವಿಯೆನ್ನಾದಲ್ಲಿ ಅಂತರ್ ರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದಾಗ ವಿಶ್ವದ ಅನೇಕ ನಾಯಕರು, ದೇಶಗಳು ಆಕರ್ಷಿತರಾಗಿ ನಮ್ಮ ವಿದೇಶ ನೀತಿಗೆ ಅಲಿಪ್ತ ನೀತಿಗೆ ಬದ್ಧವಾಗಿ ರಶ್ಯಾ ಅಥವಾ ಅಮೆರಿಕ ಪರವಾಗಿ ನಿಲ್ಲಬಾರದು ಎಂಬ ಧೋರಣೆಯನ್ನು ಮುಂದುವರಿಸಿದರು. ಇದೇ ನೀತಿಯನ್ನು ಉಕ್ರೇನ್ ಮತ್ತು ರಶ್ಯಾ ಯುದ್ಧದಲ್ಲಿ ಅನುಸರಿಸಲಾಯಿತು. ಆದರೆ ಇವರು ತಮ್ಮ ನೀತಿ ಎಂದು ಹೇಳಿಕೊಳ್ಳುತ್ತಾರೆ' ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಇವರು ಕೇವಲ ಹೆಸರು ಬದಲಾವಣೆ ಮಾಡುವುದಷ್ಟೇ. ಇವರ ಸ್ವಂತ ಬಂಡವಾಳ ಯಾವುದೂ ಇಲ್ಲ. ಅವರು ಜೈಪುರದಲ್ಲಿ ಚಿಂತನ ಶಿಬಿರ ನಡೆಸುತ್ತಿದ್ದು, ಮೋದಿ ಅವರು ಮನೆ ಮನೆಗೆ ಹೋಗಿ ನಮ್ಮ ಕೆಲಸ ತಿಳಿಸಬೇಕು ಎಂದು ಹೇಳುತ್ತಿದ್ದಾರೆ. ಅಂದರೆ ಅವರು ಮಾಡಿರುವ ಕೆಲಸ ಜನರಿಗೆ ಗೊತ್ತೇ ಇಲ್ಲ. ಅವರು ಏನಾದರೂ ಮಾಡಿದ್ದರಲ್ಲವೇ ಗೊತ್ತಿರಲು' ಎಂದು ವಾಗ್ದಾಳಿ ನಡೆಸಿದರು.

"ನಾವು ಕಟ್ಟಿ ಬೆಳೆಸಿರುವುದನ್ನು ಮಾರಾಟ ಮಾಡಿಕೊಳ್ಳುವುದೇ ಇವರ ಕೆಲಸವಾಗಿದೆ. ಬಿಎಸ್‍ಎನ್‍ಎಲ್ ದುರ್ಬಲಗೊಳಿಸಿ ಬೇರೆಯವರಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಎರಡು ಗುರಿ ಇವೆ. ಸಾರ್ವಜನಿಕ ವಲಯ ಮಾರಾಟ ಮಾಡಿದರೆ ಬಡವರಿಗೆ ಕೆಲಸ ಹಾಗೂ ಮೀಸಲಾತಿ ಸಿಗುವುದಿಲ್ಲ. ಹೀಗಾಗಿ ಬಡವರ ಶೇ.60ರಷ್ಟು ಮೀಸಲಾತಿ ದಲಿತರು, ಹಿಂದುಳಿದವರು ಹಾಗೂ ಆರ್ಥಿಕ ಹಿಂದುಳಿದವರಿಗಿದೆ. ದೇಶದ 26ಲಕ್ಷ ಉದ್ಯೋಗಳು ತುಂಬಿಲ್ಲ. ಇದರಲ್ಲಿ ಶೇ.60ರಷ್ಟು ಬಡವರಿಗೆ ನೀಡಬೇಕಲ್ಲ, ಅದಕ್ಕಾಗಿ ಈ ಷಡ್ಯಂತ್ರ ಮಾಡಿದ್ದಾರೆ. ಹೀಗಾಗಿ ನಾವು ಈ ವಲಯಗಳ ರಕ್ಷಣೆ ಮಾಡಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ಹೋರಾಡಬೇಕಿದೆ' ಎಂದು ಅವರು ಸಲಹೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯ ಕ್ರಮ ಬದಲಾವಣೆ, ಸಮಾಜದಲ್ಲಿ ಬೆಂಕಿ ಹಚ್ಚುವುದು, ಸೂಲಿಬೆಲೆ ಹೇಳಿದ ಎಂಬ ಕಾರಣಕ್ಕೆ ಭಗತ್ ಸಿಂಗ್ ಪಠ್ಯವನ್ನು ತೆಗೆಯುತ್ತಿದ್ದೀರಿ. ಹೆಡ್ಗೇವಾರ್ ನಡುವಳಿಕೆಯಿಂದ ದೇಶ ಇಬ್ಭಾಗವಾಗುತ್ತಿರುವಾಗ ಅವರ ವಿಚಾರ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ನಾರಾಯಣಗುರು ಅವರಂತಹ ವ್ಯಕ್ತಿಗಳ ಮಾಹಿತಿ ಮಕ್ಕಳಿಗೆ ನೀಡುತ್ತಿಲ್ಲ. ಹೆಡ್ಗೇವಾರ್ ಅವರ ಪಠ್ಯವನ್ನು ಏಕೆ ಸೇರಿಸಬೇಕು? ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳೇನು? 1929ರಲ್ಲಿ ಹುಟ್ಟಿದ ಆರೆಸೆಸ್ಸ್ ಅನ್ನು ಕೇವಲ 4 ಮಂದಿ ನೋಂದಣಿ ಮಾಡಿದ್ದರು. 5 ವರ್ಷಗಳ ನಂತರ ಪದಾಧಿಕಾರಿಗಳ ಮಂಡಳಿಯಲ್ಲಿ ಕೇವಲ 90ಜನ ಇದ್ದರು. ಅಂತಹವರು ಇಂದು ಬೆಳೆದು ನಿಂತು ಬಡವರನ್ನು, ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರು 25 ವರ್ಷಗಳ ಮುಂದೆ ಹೇಗೆ ನಾವು ಆಳಬೇಕೆಂದು ಮೋದಿ ಅವರು ಜೈಪುರದಲ್ಲಿ ಹೇಳುತ್ತಿದ್ದಾರೆ. ಈ ವ್ಯಕ್ತಿ ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ. ಸ್ವಾಯತ್ತ ಸಂಸ್ಥೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

'ದೇಶ ಒಡೆಯಬಾರದು ಎಂಬ ಕಾರಣಕ್ಕೆ ಇಂದಿರಾ ಗಾಂಧಿ ದೇಶಕ್ಕಾಗಿ ಬಲಿದಾನ ಕೊಟ್ಟರು. ರಾಜೀವ್ ಗಾಂಧಿ ಒಗ್ಗಟ್ಟಿನಿಂದ ಇರಲು ಪ್ರಯತ್ನಿಸಿದರು. ಆದರೆ, ಎಲ್‍ಟಿಟಿಇಯವರು ಹತ್ಯೆ ಮಾಡಿದರು. ದೇಶಕ್ಕಾಗಿ ಪ್ರಾಣ ಬಿಟ್ಟವರ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ನಾವು ದೇಶಭಕ್ತರಲ್ಲ, ಅವರು ದೇಶಭಕ್ತರಂತೆ. ದೇಶಕ್ಕೆ ಸ್ವಾತಂತ್ರ್ಯಕ್ಕೆ ಹೋರಾಟ ಮಾಡುವಾಗ ಇವರ ಪಾತ್ರ ಏನೂ ಇಲ್ಲ. ಬ್ರಿಟಿಷರ ಕೆಳಗೆ ಸರಕಾರಿ ನೌಕರಿ ಪಡೆಯಿರಿ, ಹಣ ಸಂಪಾದಿಸಿ ಎಂದು ಜನರಿಗೆ ಹೇಳುತ್ತಿದ್ದರು. ಇಂತಹವರು ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ದೇಶಕ್ಕಾಗಿ ಹೋರಾಡಿದವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಡಬೇಕು. ಯುವಕರಲ್ಲಿರುವ ತಪ್ಪು ತಿಳುವಳಿಕೆ ಅಳಿಸಬೇಕು' ಎಂದು ಅವರು ತಿಳಿಸಿದರು.

`ಕರ್ನಾಟಕ ವಿಚಾರದಲ್ಲಿ ಲಕ್ಷಾಂತರ ಎಕರೆ ಜಮೀನನ್ನು ಬಡವರಿಗೆ ಹಂಚಲಾಯಿತು. 6.60ಲಕ್ಷ ಜನರಿಗೆ ಟ್ರಿಬ್ಯುನಲ್ ರಚಿಸಿ ಬಡವರಿಗೆ ಭೂಮಿ ಕೊಟ್ಟೆವು. ಆದರೆ ಇಂದು ಕರಾವಳಿ ಭಾಗದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದರೂ ಅವರೇ ಕಾಂಗ್ರೆಸ್ ವಿರುದ್ಧ ನಿಂತಿದ್ದಾರೆ. ಸಂವಿಧಾನ ತಯಾರಾದ ದಿನ ಅದರಲ್ಲಿ ಹೆಣ್ಣು ಗಂಡಿಗೆ ವ್ಯತ್ಯಾಸವಿಲ್ಲದೇ ಸಮಾನ ಅಧಿಕಾರ ನೀಡಿದ್ದೇವೆ. ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ, ಈಗ ಅವರೇ ನಮ್ಮನ್ನು ಯಾರು ಎಂದು ಕೇಳುತ್ತಾರೆ. 

ರಾಜೀವ್ ಗಾಂಧಿ ಕಲ್ಬುರ್ಗಿಗೆ ಬಂದಿದ್ದರು, ಅಲ್ಲಿ ಪಂಚಾಯ್ತಿ ಚುನಾವಣೆಯಲ್ಲಿ ರೊಟೇಷನ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಕೊಟ್ಟೆ. ಆಗ ಅವರು ಇಲ್ಲಿ ಏಕೆ ನಿಂತಿದ್ದೀರಿ ವೇದಿಕೆ ಮೇಲೆ ಬನ್ನಿ ಎಂದು ಕರೆದರು. ನಾವು ಅಲ್ಲಿ ಕೂರುವಂತಿಲ್ಲ ಎಂದಿತ್ತು, ಆಗ ರಾಜೀವ್ ಗಾಂಧಿ ಅವರು ವೇದಿಕೆ ಮೇಲೆ 2 ಕುರ್ಚಿ ಹಾಕಿಸಿ ನಮ್ಮನ್ನು ಕೂರಿಸಿದರು. ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ನೀಡಿದ್ದು ನಮ್ಮ ಸರಕಾರ ಮಾತ್ರ ಎಂದು ತಿಳಿಸಿದರು.

ಅವರಿಗೆ ಮೋದಿ ಏನು ಕೊಟ್ಟಿದ್ದಾರೆ? ಅವರು ಜನರಿಗೆ ಪಕೋಡ ಮಾರಿ ಎಂದು ಹೇಳಿದ್ದಾರೆ. ನಾವು ಇಷ್ಟೆಲ್ಲಾ ಮಾಡಿದರೂ ನಮ್ಮ ಮೇಲೆ ಮುನಿಸಿಕೊಂಡಿರುವುದೇಕೆ? ಇಂಗ್ಲೆಂಡ್‍ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ 250 ವರ್ಷಗಳ ನಂತರ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಆದರೆ ಭಾರತದಲ್ಲಿ ಸಂವಿಧಾನ ಜಾರಿಯಾದ ದಿನವೇ ಅವರಿಗೆ ಮತದಾನದ ಹಕ್ಕು ಸಿಕ್ಕಿತು. ಆದರೂ ಮಹಳೆಯರು ನಮ್ಮ ಪರವಾಗಿ ನಿಲ್ಲುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ `ಭಾರತ್ ಜೋಡೋ' ಪಾದಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾಡಬೇಕು ಎಂದು ಒಮ್ಮತದ ತೀರ್ಮಾನ ಮಾಡಲಾಗಿದೆ. ಜನರಿಗೆ ಜಾಗೃತಿ ಮಾಡಬೇಕು. ನಾವು ಮನೆ ಮನೆ ಪ್ರಚಾರ, ಹಳ್ಳಿ ಹಳ್ಳಿಗೆ ಪ್ರಚಾರ ಮಾಡಬೇಕು. ನಮ್ಮ ನಾಯಕರು ಯಾರೇ ಅಭಿಪ್ರಾಯ ವ್ಯಕ್ತಪಡಿಸಿದರೂ ನೀವು ಅದನ್ನು ಹಂಚಿಕೊಳ್ಳಬೇಕು. ಪಕ್ಷದಲ್ಲಿ ನಮ್ಮ ಪರವಾಗಿರುವ ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ನಾವು ಮಾತನಾಡಬೇಕು. ಇನ್ನು ದುರ್ಬಲರ ಮೇಲೆ ಆಗುವ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ನಮಗೆ ಬೆಲೆ ಹಾಗೂ ಶಕ್ತಿ ಬರುತ್ತದೆ. ದೇಶದ ಒಗ್ಗಟ್ಟಿಗಾಗಿ ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದು, ಅದಕ್ಕೆ ಬೆಲೆ ಸಿಗಬೇಕಾದರೆ ನಾವು ಒಗ್ಗಟ್ಟಾಗಿರಬೇಕು ಎಂದು ಅವರು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News