ಕೋಮುವಾದಿಗಳ ತತ್ವಾದರ್ಶ ಯುವಕರಿಗೆ ವೇಗವಾಗಿ ತಲುಪುತ್ತಿವೆ: ಯು.ಟಿ.ಖಾದರ್

Update: 2022-05-21 14:19 GMT
ಯು.ಟಿ.ಖಾದರ್ (File Photo)

ಬೆಂಗಳೂರು: `ರಾಜೀವ್ ಗಾಂಧಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲು ಹಾಗೂ ಅವರ ತತ್ವ, ಆದರ್ಶ ಹಾಗೂ ವ್ಯಕ್ತಿತ್ವವನ್ನು ನಾವು ಯುವಕರಿಗೆ ತಲುಪಿಸಬೇಕು. ಇಂದು ಕೋಮುವಾದಿಗಳ ತತ್ವ-ಆದರ್ಶ ಯುವಕರಿಗೆ ಹೆಚ್ಚು ವೇಗವಾಗಿ ತಲುಪುತ್ತಿದ್ದು, ನೆಹರು, ಗಾಂಧಿ ಅವರ ತತ್ವಗಳು ತಲುಪುತ್ತಿಲ್ಲ. ಇವರ ತತ್ವಗಳು ಜನರಿಗೆ ತಲುಪದ ಪರಿಣಾಮ ಇಂದು ಸಮಾಜದಲ್ಲಿ ಸಮಸ್ಯೆ ಸೃಷ್ಟಿಯಾಗಿವೆ. ದೇಶ ಹಾಗೂ ಸಮಾಜಕ್ಕೆ ಅವರು ಕೊಟ್ಟ ದೂರದೃಷ್ಟಿಯನ್ನು ನಾವು ಅಳವಡಿಸಿಕೊಳ್ಳಬೇಕು' ಎಂದು ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ರಾಷ್ಟ್ರದಿಂದ ತಂತ್ರಜ್ಞಾನ ರಾಷ್ಟ್ರವನ್ನಾಗಿ ಮಾಡಿದ ಕೀರ್ತಿ ರಾಜೀವ್ ಗಾಂಧಿ ಅವರಿಗೆ ಸಲ್ಲಬೇಕು. ಎಲ್ಲ ಹಂತದಲ್ಲಿ ರಾಜೀವ್ ಗಾಂಧಿ ಅವರು ದೇಶವನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ. ರಾಜೀವ್ ಗಾಂಧಿ ಅವರು ನವೋದಯ ಶಾಲೆಗಳನ್ನು ದೇಶದುದ್ದಗಲಕ್ಕೆ ಆರಂಭಿಸಿದ್ದಾರೆ. 7,700 ಗ್ರಾಮಗಳಲ್ಲಿ ಈ ನವೋದಯ ಶಾಲೆಗಳು ನಿರ್ಮಾಣ ಮಾಡಿ ಶಿಕ್ಷಣ ನೀಡಲಾಗುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಇಂತಹ ಒಂದು ನವೋದಯ ಶಾಲೆಗಳನ್ನು ಪ್ರಾರಂಭಿಸಿದೆಯೇ?' ಎಂದು ಪ್ರಶ್ನಿಸಿದರು.

"ಮೀಸಲಾತಿಯನ್ನು ಮಂಡಲ ಸಮಿತಿ ಮೂಲಕ ಜಾರಿಗೆ ತಂದರು. ಎಲ್ಲರನ್ನು ಮುಖ್ಯವಾಹಿನಿಗೆ ತರುವ ಉದ್ದೇಶ ಇಟ್ಟುಕೊಂಡಿದ್ದರು. ಈ ಮೀಸಲಾತಿಯಿಂದ ಅನೇಕರು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಇಂದು ಬಿಜೆಪಿ ಸರಕಾರ ಸುಪ್ರೀಂ ಕೋರ್ಟ್ ಹೆಸರು ಹೇಳುತ್ತಾ ಮೀಸಲಾತಿಯನ್ನು ನಿರ್ಮೂಲನೆ ಮಾಡಲು ಹೊರಟಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾತ್ರ ಮೀಸಲಾತಿ ಸಮಸ್ಯೆಗಳು ತಲೆದೋರುತ್ತವೆ" ಎಂದು ಅವರು ಟೀಕಿಸಿದರು.

"ರಾಜೀವ್ ಗಾಂಧಿ ಅವರು 18 ವರ್ಷದವರಿಗೆ ಮತದಾನ ಹಕ್ಕು ನೀಡಲು ಹೋದಾಗ ಇದೇ ಬಿಜೆಪಿ ಅದನ್ನು ಟೀಕಿಸಿದ್ದರು. ಮಕ್ಕಳ ಕೈಲಿ ದೇಶವನ್ನು ಕೊಟ್ಟು ಹಾಳು ಮಾಡುತ್ತಿದ್ದಾರೆಂದು ಹೇಳಿದ್ದರು. ಆಗ ರಾಜೀವ್ ಗಾಂಧಿ 16 ವರ್ಷದ ಯುವಕರಿಗೆ ಗನ್ ಕೊಟ್ಟು ಗಡಿ ಕಾಯಲು ಹೇಳುವಾಗ ಅವರಿಗೆ ಮತದಾನದ ಹಕ್ಕು ನೀಡುವುದರಲ್ಲಿ ತಪ್ಪೇನಿದೆ? ಎಂದು ಹೇಳಿದ್ದರು ಎಂದು ಅವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, `ರಾಜೀವ್ ಗಾಂಧಿ ಅವರು ಈ ದೇಶವನ್ನು 21ನೆ ಶತಮಾನಕ್ಕೆ ಸಜ್ಜುಗೊಳಿಸಿದ ಅತ್ಯಂತ ಶ್ರೇಷ್ಠ ನಾಯಕರು. ಅವರಿಗೆ ಯುವಕರ ಬಗ್ಗೆ ವಿಶೇಷ ಆಸಕ್ತಿ. ಅವರು ಯುವಕರ ಮತದಾನದ ಹಕ್ಕನ್ನು 21ರಿಂದ 18 ವರ್ಷಕ್ಕೆ ಇಳಿಸಿದ್ದರು. ಈ ದೇಶ ಕಟ್ಟುವ ಭವಿಷ್ಯದ ನಾಯಕರನ್ನು ಗುರುತಿಸಲು ಉತ್ಸುಕರಾಗಿದ್ದರು. ಗ್ರಾಮಗಳು ರಾಮರಾಜ್ಯವಾಗಬೇಕು, ನಿಮ್ಮ ಗ್ರಾಮ ನಿಮ್ಮ ಅಧಿಕಾರ ಇರಬೇಕು ಎಂದು ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿದರು. ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ದಲಿತರಿಗೆ ಮೀಸಲಾತಿ ಕೊಟ್ಟರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News