ಚಿಕ್ಕಮಗಳೂರು: ನಗರಸಭೆ ಸದಸ್ಯನ ವಿರುದ್ಧ ಜಾತಿ ನಿಂದನೆ; ಆರೋಪ

Update: 2022-05-21 13:59 GMT

ಚಿಕ್ಕಮಗಳೂರು: ನಗರಸಭಾ ಕಚೇರಿಯಲ್ಲಿ ದಲ್ಲಾಳಿಗಳ ನಿಯಂತ್ರಣಕ್ಕೆಂದು ನೇಮಕ ಮಾಡಿರುವ ಸೆಕ್ಯೂರಿಟಿ ಗಾರ್ಡ್ ವಿಚಾರ ಸಂಬಂಧ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರನ್ನು ಪ್ರಶ್ನಿಸಿದ ಕಾರಣಕ್ಕೆ ನಗರಸಭೆ ಸದಸ್ಯರ ಮೇಲೆ ಪ್ರಕರಣ ದಾಖಲು ಮಾಡಿರುವುದಲ್ಲದೇ ಜಾತಿನಿಂದನೆ ಮಾಡಿ ಅವಮಾನಿಸಿದ್ದಾರೆ. ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ  ಜೆಡಿಎಸ್ ಮುಖಂಡರು ನಗರಸಭೆ ಕಚೇರಿಯ ಗೇಟಿನ ಎದುರು ಶನಿವಾರ ಧರಣಿ ನಡೆಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ನಗರಸಭೆ ಆಡಳಿತ ಮಂಡಳಿಯು ಸದಸ್ಯರ ಹಕ್ಕುಚ್ಯುತಿಗೊಳಿಸುವ ಜೊತೆಗೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ದಲಿತ ಸಮುದಾಯದ ನಗರಸಭೆ ಸದಸ್ಯರಿಗೆ ಜಾತಿ ನಿಂದನೆ ಮಾಡಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ವಿರುದ್ಧ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದರು.

ನಗರಸಭೆ ಆಡಳಿತ ಸಂಪೂರ್ಣ ಕುಸಿದಿದ್ದು, ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಸಾರ್ವಜನಿಕರ ಕೆಲಸಗಳಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ನಾಗರಿಕರು ತಮ್ಮ ನಗರಸಭೆ ಕೆಲಸಗಳಿಗೆ ಮಧ್ಯವರ್ತಿಗಳನ್ನು ಅವಲಂಭಿಸದಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು. ನಗರಸಭೆ ಆಡಳಿತ ಮಂಡಳಿ ಜನಪರ ಆಡಳಿತ ನೀಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದರು.

ನಗರಸಭೆ ಸದಸ್ಯ ಗೋಪಿ ಮಾತನಾಡಿ, ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಪರಿಣಾಮ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಗರಸಭೆ ಸಿ.ಎಂ.ಸಿ. ಗ್ರೂಪ್‍ನಿಂದ ತಮ್ಮ ಹೆಸರನ್ನು ಹೊರತೆಗೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸುವ ವೇಳೆಯಲ್ಲಿ ಏಕಾಏಕಿ ಅಧ್ಯಕ್ಷರು ಹಾಗೂ ಪೌರಾಯುಕ್ತರು ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದ್ದರಿಂದ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ವಿರುದ್ಧ ಎಸ್ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿರುವ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿ ಎಫ್‍ಐಆರ್ ದಾಖಲಿಸಲಾಗಿದೆ. ಎಫ್‍ಐಆರ್ ಆಗಿರುವ ಈ ಇಬ್ಬರು ಸರಕಾರಿ ಕಚೇೀರಿಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಅವರನ್ನು ಪೊಲೀಸ್ ಇಲಾಖೆ ಬಂಧಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಇರ್ಷಾದ್, ಯವಜನತಾದಳ ನಗರಾಧ್ಯಕ್ಷ ಹರಿಗುಪ್ತ, ಮುಖಂಡರಾದ ಚಾಂದ್‍ಪಾಷ, ಶಿವು, ಆನಂದೇಗೌಡ, ಪಾಂಚು, ಹನುಮಂತ, ರಾಮು, ಪ್ರಮೋದ, ಪೂರ್ಣೇಶ್, ಮಂಜುನಾಥ್, ಗುಪ್ತಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News