‘ಹಜ್ ಯಾತ್ರಿಗಳಿಗೆ ರಾಜ್ಯಾದ್ಯಂತ ತರಬೇತಿ ಆರಂಭ’: ಜೂ.9ರಂದು ರಾಜ್ಯದಿಂದ ಮೊದಲ ವಿಮಾನ ರವಾನೆ

Update: 2022-05-21 14:48 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಮೇ 21: ಪ್ರಸಕ್ತ ಸಾಲಿನ ಪವಿತ್ರ ಹಜ್‍ಯಾತ್ರೆಗಾಗಿ ಆಯ್ಕೆಯಾಗಿರುವ ಯಾತ್ರಿಗಳಿಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಆರಂಭಿಸಲಾಗಿದೆ. ಜೂ.9ರಂದು ರಾಜ್ಯದ ಹಜ್ ಯಾತ್ರಿಗಳ ವಿಮಾನ ರವಾನೆಯಾಗಲಿದೆ ಎಂದು ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲ ತಿಳಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಇಂದು(ಮೇ 21) ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಯಾತ್ರಿಗಳಿಗಾಗಿ ಶಿವಮೊಗ್ಗದಲ್ಲಿ ತರಬೇತಿ ನೀಡಲಾಗಿದೆ. ಮೇ 22ರಂದು ಹುಬ್ಬಳ್ಳಿಯ ನೆಹರು ಪದವಿ ಕಾಲೇಜಿನಲ್ಲಿ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಯಾತ್ರಿಗಳಿಗಾಗಿ ತರಬೇತಿ ನೀಡಲಾಗುವುದು ಎಂದರು.

ಮೇ 23ರಂದು ವಿಜಯಪುರ(ಬಿಜಾಪುರ)ದ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ, ಮೇ 24ರಂದು ಮಂಗಳೂರಿನ ಬೈಕಂಪಾಡಿಯಲ್ಲಿರುವ ಅಡ್ಕ ಕಮ್ಯೂನಿಟಿ ಹಾಲ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಯಾತ್ರಿಗಳಿಗಾಗಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಮೇ 25 ಹಾಗೂ 26ರಂದು ಕಲಬುರಗಿಯ ಮೊಘಲ್ ಪಂಕ್ಷನ್ ಹಾಲ್‍ನಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ(ಹೊಸಪೇಟೆ)ಜಿಲ್ಲೆ, ಮೇ 26ರಂದು ಮೈಸೂರಿನ ಉದಯಗಿರಿಯಲ್ಲಿರುವ ಆರ್.ಕೆ.ಪ್ಯಾಲೇಸ್‍ನಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಯಾತ್ರಿಗಳಿಗಾಗಿ ತರಬೇತಿ ನೀಡಲಾಗುವುದು ಎಂದು ರವೂಫುದ್ದೀನ್ ಕಚೇರಿವಾಲ ತಿಳಿಸಿದರು.

ಮೇ 28 ಹಾಗೂ 29ರಂದು ಬೆಂಗಳೂರಿನ ಹಜ್ ಭವನದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ತುಮಕೂರು ಜಿಲ್ಲೆ ಮತ್ತು ಮೇ 30ರಂದು ದಾವಣಗೆರೆಯ ರಾಜಮಹಲ್ ಕಮ್ಯೂನಿಟಿ ಹಾಲ್‍ನಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಯಾತ್ರಿಗಳಿಗಾಗಿ ತರಬೇತಿ ನೀಡಲಾಗುವುದು. ತರಬೇತಿ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಲಸಿಕಾಕರಣ ಆರಂಭಿಸುತ್ತೇವೆ. ದಯವಿಟ್ಟು ಎಲ್ಲ ಯಾತ್ರಿಗಳು ನಿಗದಿತ ದಿನಾಂಕದಂದು ತಮ್ಮ ತಮ್ಮ ಜಿಲ್ಲೆಗಳಲ್ಲಿ ತರಬೇತಿಯನ್ನು ಪಡೆದುಕೊಳ್ಳುವಂತೆ ಎಂದು ಅವರು ಮನವಿ ಮಾಡಿದರು.

ಯಾತ್ರಿಗಳಿಗೆ ತರಬೇತಿ ನೀಡುವವರಿಗೆ ಮುಂಬೈನಲ್ಲಿರುವ ಭಾರತೀಯ ಹಜ್ ಸಮಿತಿಯ ಕಚೇರಿಯಲ್ಲಿ ತರಬೇತಿ ನೀಡಲಾಗಿದ್ದು, ಅವರು ಪ್ರಸ್ತುತ ಸೌದಿ ಅರೇಬಿಯಾದಲ್ಲಿರುವ ಪರಿಸ್ಥಿತಿ ಹಾಗೂ ಅಲ್ಲಿನ ಸಿದ್ಧತೆಗಳ ಅನುಸಾರವಾಗಿ ನಮ್ಮ ರಾಜ್ಯದ ಯಾತ್ರಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಈ ಬಾರಿ ನಮ್ಮ ರಾಜ್ಯಕ್ಕೆ 2700 ಮಂದಿಯ ಕೋಟಾ ನಿಗದಿ ಮಾಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಶೇ.30ರಷ್ಟು ಜನರಿಗೆ ಅವಕಾಶ ಕಲ್ಪಿಸಿದ್ದಾರೆ. ಸುಮಾರು 3000 ಮಂದಿ ಈ ಬಾರಿ ರಾಜ್ಯದಿಂದ ಹಜ್‍ಯಾತ್ರೆಗೆ ತೆರಳುವ ನಿರೀಕ್ಷೆಯಿದೆ ಎಂದು ರವೂಫುದ್ದೀನ್ ಕಚೇರಿವಾಲ ತಿಳಿಸಿದರು.

ರಾಜ್ಯದ ಹಜ್ ಯಾತ್ರಿಗಳನ್ನು ಒಳಗೊಂಡ ಮೊದಲ ವಿಮಾನ ಜೂ.9ರಂದು ಹೊರಡಲಿದೆ. ಜೂ.8ರಂದು ಸಂಜೆ ಬೆಂಗಳೂರಿನ ಹಜ್ ಭವನದಲ್ಲಿ ಯಾತ್ರಿಗಳ ಬಿಳ್ಕೋಡುಗೆ ಸಮಾರಂಭವನ್ನು ಆಯೋಜಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಜ್ಯದ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಭಾರತೀಯ ಹಜ್ ಸಮಿತಿಯ ಸಿಇಒ, ನಮ್ಮ ರಾಜ್ಯದ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು, ಸಂಸದರನ್ನು ಈ ಸಮಾರಂಭಕ್ಕೆ ಆಹ್ವಾನಿಸಲಾಗುವುದು.

ರವೂಫುದ್ದೀನ್ ಕಚೇರಿವಾಲ, ರಾಜ್ಯ ಹಜ್ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News