"1000 ಕಾರ್ಯಕರ್ತರು ಬಂದು ತಲಾ 5 ರಿಂದ 10 ವೋಟು ಮಾಡಿ ಗೆಲ್ಲಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂತು"

Update: 2022-05-21 15:27 GMT

ಬೆಂಗಳೂರು, ಮೇ 21: ‘ಉಪಚುನಾವಣೆಯಲ್ಲಿ ಒಂದು ಸಾವಿರ ಜನ ಕಾರ್ಯಕರ್ತರು ಬಂದು... ಐದೈದು, ಹತ್ತತ್ತು ಓಟ್ ಹಾಕಿದ್ರು. ಆ ರೀತಿ ಪಕ್ಷ ಕಟ್ಟಿದ್ದಕ್ಕೆ.. ಇವತ್ತು 119 ವಿಧಾನಸಭಾ ಸದಸ್ಯರನ್ನು ಇಟ್ಕೊಂಡು ಸರಕಾರ ಮಾಡಿದ್ದೇವೆ..’ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಮುನಿರಾಜು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶನಿವಾರ ಮುನಿರಾಜು ಅವರ ವಿಡಿಯೋ ಲಿಂಕ್ ಮಾಡಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಏನಿದು ರಹಸ್ಯ? ಅಸಹ್ಯ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು  ಪ್ರಶ್ನಿಸಿದ್ದಾರೆ.

‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಟು ವರ್ಷದಿಂದ ಹಾಡಿದ ರಾಗವನ್ನೇ ರಾಜ್ಯ ಬಿಜೆಪಿ ನಾಯಕರು ಮೂರು ವರ್ಷದಿಂದ ಹಾಡ್ತಿದ್ದಾರೆ. ನೀವು ಅಧಿಕಾರಕ್ಕೆ ಬಂದು ಮಾಡಿದ್ದಾದ್ರೂ ಏನು? ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ' ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.

‘ಕಳೆದ ಬಾರಿ ಬಿಬಿಎಂಪಿ ಮೇಯರ್ ಆಗಿದ್ದವರು ಬಿಜೆಪಿಯವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು ಮೂರು ವರ್ಷ ತುಂಬುತ್ತಾ ಬಂತು. ನೀವೇ ತುಂಬಿಸಿರುವ ಶೇ.40ರಷ್ಟು ಕಮಿಷನ್ ಎಂಬ ಪಾಪದ ಕೊಡ ತಲೆ ಮೇಲಿಟ್ಟುಕೊಂಡು ನಮ್ಮನ್ನ ದೂರಿದ್ರೆ ಹೇಗಪ್ಪ ಆರ್.ಅಶೋಕ್?' ಎಂದು ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನೆ ಮಾಡಿದ್ದಾರೆ.

‘ನಮ್ಮ ಸರಕಾರವಿದ್ದಾಗ ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ 1,217ಕೋಟಿ ರೂ.ಅನುದಾನ ನೀಡಿದ್ದೆವು. ಬಜೆಟ್‍ನಲ್ಲಿ ಬಿಜೆಪಿ ಸರಕಾರ ಬೆಂಗಳೂರಿಗೆ 1,500 ಕೋಟಿ ರೂ.ಘೋಷಣೆ ಮಾಡಿದ್ದು ಬಿಟ್ಟರೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಪಾಪ ಮಾಡಿದವರು ಯಾರಪ್ಪ ಆರ್.ಅಶೋಕ್?'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News