ಚಿಕ್ಕಮಗಳೂರು: ವಿದ್ಯುತ್ ಕಡಿತಕ್ಕೆ ಕೋಪಗೊಂಡು ಲೈನ್‍ಮ್ಯಾನ್‍ಗೆ ಹಲ್ಲೆ; ಆರೋಪ

Update: 2022-05-21 16:09 GMT

ಚಿಕ್ಕಮಗಳೂರು: ಕರ್ತವ್ಯನಿರತ ಲೈನ್‍ಮ್ಯಾನ್ ಮೇಲೆ ವಿನಾಕಾರಣ ನಾಲ್ವರು ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ಜಿಲ್ಲೆಯ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಘಟನೆ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕಳಸ ಪಟ್ಟಣದಲ್ಲಿರುವ ಮೆಸ್ಕಾಂ ಶಾಖೆಯ ಲೈನ್‍ಮ್ಯಾನ್ ಹೇಮಂತ್‍ಕುಮಾರ್ ಹಲ್ಲೆಗೊಳಗಾದ ನೌಕರನಾಗಿದ್ದು, ಕಳಸ ಪಟ್ಟಣ ಸಮೀಪದ ಹಿರೇಬೈಲು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದರಿಂದ ಶಾಖಾಧಿಕಾರಿ ಸೂಚನೆ ಮೇರೆಗೆ ಲೈನ್‍ಮ್ಯಾನ್ ಹೇಮಂತ್‍ಕುಮಾರ್ ಶುಕ್ರವಾರ ರಾತ್ರಿ ಹಿರೇಬೈಲಿನ ಮೆಸ್ಕಾಂ ಕ್ಯಾಂಪ್‍ನಲ್ಲಿ ಉಳಿದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಊಟ ಮಾಡಲು ಹಿರೇಬೈಲು ಗ್ರಾಮದಲ್ಲಿರುವ ಕ್ಯಾಂಟಿನ್‍ವೊಂದಕ್ಕೆ ಆಗಮಿಸಿದ್ದ ವೇಳೆ ನಾಲ್ವರು ಸ್ಥಳೀಯರು ಕ್ಯಾಂಟಿನ್ ಮಾಲಕರೊಂದಿಗೆ ವಾಗ್ವಾದದಲ್ಲಿ ನಿರತರಾಗಿದ್ದರು. ಈ ವೇಳೆ ಊಟ ಮಾಡುತ್ತಿದ್ದ ಹೇಮಂತ್‍ಕುಮಾರ್ ಅವರನ್ನು ಕಂಡ ನಾಲ್ವರು ವಿದ್ಯುತ್ ಕಡಿತಕ್ಕೆ ಕೋಪಗೊಂಡು ಲೈನ್‍ಮ್ಯಾನ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಎರಡು ದಿನಗಳಿಂದ ಕರೆಂಟ್ ಇಲ್ಲ, ನೀನು ಇಲ್ಲಿ ಆರಾಮಾಗಿ ಊಟ ಮಾಡಿಕೊಂಡು ಮಾಜಾ ಮಾಡುತ್ತಿದ್ದೀಯಾ ಎಂದು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ಹಲ್ಲೆಯಿಂದ ಹೇಮಂತ್‍ಕುಮಾರ್ ಅವರ ಕೈ ಮತ್ತು ಕಾಲಿಗೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂದ ಮೆಸ್ಕಾಂ ಅಧಿಕಾರಿಗಳು ಹಾಗೂ ನೌಕರರಸಂಘದ ಸದಸ್ಯರು ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಉಳಿದ ಮೂವರು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News