ಬೆಂಗಳೂರು ನಗರದ ಆರೋಗ್ಯ ಸರಿಪಡಿಸಿ: ಸೋಮಣ್ಣಗೆ ಎಚ್‍ಡಿಕೆ ತಿರುಗೇಟು

Update: 2022-05-21 18:21 GMT
File Photo

ಬೆಂಗಳೂರು, ಮೇ 21: ನಮ್ಮ ಆರೋಗ್ಯದ ಬಗ್ಗೆ ಸಚಿವ ವಿ.ಸೋಮಣ್ಣ ಅವರಿಗೆ ಕಾಳಜಿ ಬೇಡ, ಆರೋಗ್ಯ ಯಾವ ರೀತಿ ಇಟ್ಟುಕೊಳ್ಳಬೇಕೆಂದು ವೈದ್ಯರು ನಮಗೆ ಹೇಳಿದ್ದಾರೆ. ಯೋಗ್ಯತೆ ಇದ್ದರೆ ಬೆಂಗಳೂರು ನಗರ ಆರೋಗ್ಯ ಸರಿಪಡಿಸಿ ಎಂದು ಸಚಿವ ವಿ.ಸೋಮಣ್ಣಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಶನಿವಾರ ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ಹೊರ ವರ್ತುಲ ರಸ್ತೆಯ ಜಂಕ್ಷನ್, ಥಣಿಸಂದ್ರ ಮತ್ತಿತರ ಕಡೆ ಮಳೆ ಹಾನಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಏನು ಅಂತ ಸೋಮಣ್ಣ ಅವರಿಂದ ನಾನು ಕಲಿಯಬೇಕಿಲ್ಲ. ಜೆಡಿಎಸ್‍ನಲ್ಲಿ ಯಾವ ರೀತಿ ಬೆಳೆದಿರಿ, ದೇವೇಗೌಡರ ಹೆಸರಲ್ಲಿ ಯಾವ ರೀತಿ ಬೆಳವಣಿಗೆ ಕಂಡಿರಿ ಎನ್ನುವುದು ಎಲ್ಲ ಗೊತ್ತಿದೆ. ಬಿಡುವಿದ್ದರೆ ಬರುವುದಕ್ಕೆ ಹೇಳಿ ಪಾಠ ಮಾಡುತ್ತೇನೆ ಎಂದರು.

ರಾಜಕಾಲುವೆ, ರಸ್ತೆ ಕೆಲಸ ಮಾಡದೆ ಕೋಟ್ಯಂತರ ರೂಪಾಯಿ ಲೂಟಿ ಮಾಡಿದಿರಿ. ನಾನು 1973 ರಿಂದ ಬೆಂಗಳೂರಿನಲ್ಲೆ ಬದುಕಿ ಕೆಲಸ ಮಾಡಿದ್ದೇನೆ. ಮತ ಕೊಟ್ಟ ಜನರಿಗೆ ಮೋಸ ಮಾಡಿಲ್ಲ. ಅಧಿಕಾರಿಗಳಿಗೆ ಹಿಂದೆ ನೀರು ನಿಲ್ಲಿಸಲು ಹೇಳಿ ಮುಂದೆ ಬೈಯುವ ಕೆಲಸ ಮಾಡಿಲ್ಲ. ಸೋಮಣ್ಣ ಅವರಿಗೆ ಹೊಟ್ಟೆ ಉರಿ ಶುರುವಾಗಿರಬೇಕು. ದುಡ್ಡು, ಅಧಿಕಾರದ ಮತ್ತಲ್ಲಿ ಅವರಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಗಾರಿದರು.

ನರೇಂದ್ರ ಮೋದಿ ಮುಖ ನೋಡಿ ಮತ ಹಾಕ್ತಾರೆ ಅಂದುಕೊಂಡಿದ್ದರೆ ಅದು ಸುಳ್ಳು. ಇಡೀ ಬೆಂಗಳೂರು ನಗರವನ್ನೇ ಆವರಿಸಿಕೊಳ್ಳುತ್ತೇವೆ ಎಂದರೆ ಅದು ಸುಳ್ಳು ಅಷ್ಟೇ. ಬನ್ನಿ ಜನರ ನೋವು ನೋಡಿ. ಅಭಿವೃದ್ಧಿ ಹೆಸರಲ್ಲಿ ತಿಂದಿದ್ದು ಸಾಕು. ರಾಜಕಾಲುವೆಗೆ ಹಣ ಕೊಡುತ್ತೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಅದನ್ನಾದರೂ ಸರಿಯಾಗಿ ಉಪಯೋಗಿಸಿಕೊಳ್ಳಿ. ಚಕ್ರ ತಿರುಗುತ್ತದೆ, ಅವರಿಗೆ ಕುಮಾರಸ್ವಾಮಿಯನ್ನು ಅರಗಿಸಿಕೊಳ್ಳಲು ಆಗೋದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರು ನಗರ ಜನತೆಗೆ ಹೊಸ ಪ್ರಣಾಳಿಕೆ ಅಂತ ಕಾಂಗ್ರೆಸ್ ಹೇಳುತ್ತಿದೆ. ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಅವರು ಯಾವ ಕೆಲಸವನ್ನೂ ಮಾಡಲಿಲ್ಲ. 2006ರಲ್ಲಿಯೇ ಬೆಂಗಳೂರಿನ ಬೆಳವಣಿಗೆ ನಿಲ್ಲಿಸಿ ಐದು ಟೌನ್‍ಶಿಪ್ ಮಾಡಲು ನೀಲಿನಕ್ಷೆ ತಯಾರು ಮಾಡಿದ್ದೆ. ಆದರೆ, ನಮಗೆ ಸಹಕಾರ ಸಿಗಲಿಲ್ಲ. ಕೊರಿಯನ್ ಕಂಪನಿ ಮುಂದೆ ಬಂದಿತ್ತು. ಯೋಜನೆಗೆ ಅನುಮತಿ ಕೊಡಲು ಮುಂದಾಗಿದ್ದೆ ನಾನು. ಬಿಜೆಪಿಯವರು ಬೆಂಬಲ ಕೊಡಲಿಲ್ಲ. ಕೆರೆ ಕಟ್ಟೆಗಳನ್ನು ನುಂಗಿದ ನೀವು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ನಾವು ಟೀ ಮಾರುವವರಿಗೂ ಟಿಕೆಟ್ ಕೊಡುತ್ತೇವೆ, ಜೆಡಿಎಸ್‍ನವರು ಮನೆಯವರಿಗೆ ಮಾತ್ರ ಕೊಡುತ್ತಾರೆ ಎಂದು ಹೇಳಿಕೆ ನೀಡಿರುವ ಸಚಿವ ಆರ್.ಅಶೋಕ್‍ಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ಯಾರು ಟೀ ಮಾರುವವರಿಗೆ ಟಿಕೆಟ್ ಕೊಡುತ್ತಾರೆ. ಯಾರು ಮನೆಯವರಿಗೆ ಟಿಕೆಟ್ ಕೊಡುತ್ತಾರೆ ಎನ್ನುವುದು ಗೊತ್ತಿದೆ. ಬಿಜೆಪಿಯಲ್ಲಿ ಇರುವ ಕುಟುಂಬ ರಾಜಕರಣದ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಅವರಂತೆಯೇ ನಾನು ಲೂಟಿ ಮಾಡಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಎಚ್.ಎಂ.ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್. ಪ್ರಕಾಶ್ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News