ಕಾರ್ಗಲ್ | ಮರಗಳ ಕಳ್ಳ ಸಾಗಾಟ: ನೆಡುತೋಪಿನ ಕಾವಲುಗಾರ ಸಹಿತ ಇಬ್ಬರ ಬಂಧನ

Update: 2022-05-22 08:33 GMT

ಶಿವಮೊಗ್ಗ, ಮೇ 22: ಸಾಗರ ತಾಲೂಕಿನ ಕಾರ್ಗಲ್ ನ ಕರೂರು ಗ್ರಾಮ ವ್ಯಾಪ್ತಿಯ ಎಂಪಿಎಂ ಅರಣ್ಯ ಇಲಾಖೆಯ ನೀಲಗಿರಿ ಹಾಗೂ ಅಕೇಶಿಯ ಪ್ಲಾಂಟೇಶನ್‌ನಲ್ಲಿ ಮರಗಳನ್ನು ಕಟಾವು ಮಾಡಿ ಕಳ್ಳ ಸಾಗಾಟ ಮಾಡಿದ ಆರೋಪದಲ್ಲಿ ನೆಡುತೋಪಿನ ಕಾವಲುಗಾರ ಮತ್ತು ಆತನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ನೆಡುತೋಪಿನ ಕಾವಲುಗಾರ ಮಂಜುನಾಥ(56) ಮತ್ತು ಆತನ ಪುತ್ರ ಮಣಿಕಂಠ (27) ಬಂಧಿತ ಆರೋಪಿಗಳು. ದೂರು ದಾಖಲಾದ 24 ಗಂಟೆಯೊಳಗೆ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಕಾರ್ಗಲ್ ಠಾಣಾ ಪೊಲೀಸರು 1.5 ಲಕ್ಷ ರೂ. ಮೌಲ್ಯದ ಅಕೇಶಿಯಾ ಮತ್ತು ಎರಡು ಲಾರಿ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಅಕೇಶಿಯ ಪ್ಲಾಂಟೇಶನ್‌ನಲ್ಲಿ ಕಳವು ಮಾಡಿದ್ದ ಮರ ಮತ್ತು ಲಾರಿಗಳು ದಾಂಡೇಲಿಯ ವೆಸ್ಟ್ ಕೋರ್ಸ್ ಪೇಪರ್ ಮಿಲ್‌ನ ಆವರಣದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೂರು ಹೋಬಳಿ ನಾಡಕಿರುವಾಸೆ ಗ್ರಾಮದ ಸರ್ವೇ ನಂ 207 ಮತ್ತು 185ರಲ್ಲಿ ಎಂಪಿಎಂ ನೆಡುತೋಪು ಕರೂರು ಬ್ಲಾಕ್ ನಂ 2008 ಸಂಖ್ಯೆ 240 'ಎ'ಯಲ್ಲಿ 16.40 ಹೆಕ್ಟೇರ್ ಪ್ರದೇಶದಲ್ಲಿ ಅಕೇಶಿಯ ಹೈಬ್ರಿಡ್ ನೆಡುತೋಪು ಪ್ರದೇಶವಿದ್ದು, ಇಲ್ಲಿ ಬೆಳೆದಿದ್ದ ಮರಗಳನ್ನು ಕಟಾವು ಮಾಡಿ ಸಾಗಾಟ ಮಾಡಲು ಗುತ್ತಿಗೆದಾರ ಅಬ್ದುಲ್ ಬೇಗ್ ಎಂಬುವರಿಗೆ ಇಲಾಖೆಯಿಂದ ಗುತ್ತಿಗೆ ನೀಡಲಾಗಿದೆ.

ಕೆಲವು ತಿಂಗಳು ಹಿಂದೆಯಷ್ಟೇ ಮರಗಳನ್ನು ಗುತ್ತಿಗೆದಾರ ಕಟಾವು ಮಾಡಿ ಸಾಗಿಸಿದ್ದರು. ವಾರದ ಹಿಂದೆ ಅಕ್ರಮವಾಗಿ ಕಟಾವು ಮಾಡಿಸಿ ಎರಡು ಲಾರಿಯಲ್ಲಿ ಅಕ್ರಮ ಸಾಗಾಟ ಮಾಡಲಾಗಿದ್ದು, ಸುಳ್ಳಳ್ಳಿ ಘಟಕದ ಎಂಪಿಎಂ ಸಹಾಯಕ ಅರಣ್ಯಾಧಿಕಾರಿ ಪಾಸ್ಕಲ್ ರೋಡ್ರಿಗಸ್ ಅವರು ಕಾರ್ಗಲ್ ಠಾಣೆಗೆ ದೂರು ನೀಡಿದ್ದರು.

ನಾಟಾ ಕಳವು ಪ್ರಕರಣದ ಆರೋಪಿಗಳ ಪತ್ತೆಗೆ ಎಸ್ಪಿ ಬಿ.ಎಂ. ಲಕ್ಷ್ಮಿಪ್ರಸಾದ್ ಅವರು ಸಾಗರ ಎಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಕಾರ್ಗಲ್ ಪಿಎಸ್ಸೈ ತಿರುಮಲೇಶ್ ನಾಯ್ಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡದಲ್ಲಿ ಕಾರ್ಗಲ್ ಠಾಣೆಯ ಎಎಸ್ಸೈ ಕರಿಬಸಪ್ಪ, ಸಿಬ್ಬಂದಿಯಾದ ದಿನೇಶ್, ಪುರುಷೋತ್ತಮ, ಸುನೀಲ್‌ಕುಮಾರ್, ಭರತ್ ಕುಮಾರ್, ಬಸವರಾಜ್, ಕಿರಣಾಚಾರಿ, ಹಾಗೂ ಮಲ್ಲಪ್ಪ ಪಿಡಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News