'ಕಾರ್ಪೊರೇಟ್ ಮಿತ್ರರನ್ನೂ ವಂಚಿಸಿ ಜನರಿಗೆ ಅನುಕೂಲ ಮಾಡಿಕೊಡಿ': ಪ್ರಧಾನಿಗೆ ವಿಡಂಬನಾ ಸಲಹೆ ನೀಡಿದ ಎಚ್.ಸಿ.ಮಹದೇವಪ್ಪ

Update: 2022-05-22 13:30 GMT

ಬೆಂಗಳೂರು, ಮೇ 22: ‘ಪ್ರಧಾನಿ ಮೋದಿಯವರೇ ನಿಮ್ಮ ಸಂವೇದನಾಶೀಲತೆಯನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡು ಅಡುಗೆ ಎಣ್ಣೆ, ಬೇಳೆ ಕಾಳು, ಆಹಾರ ಧಾನ್ಯಗಳ ದರವನ್ನು ಮತ್ತು ಪ್ರಯಾಣಿಕರ ದೈನಂದಿನ ಸಾಗಾಣಿಕಾ ವೆಚ್ಚವನ್ನು ತಗ್ಗಿಸಿ. ಪ್ರತಿದಿನ ಜನರನ್ನು ವಂಚಿಸುವಂತೆ ನಿಮ್ಮ ತಂತ್ರಗಳಿಂದ ಈ ಬಾರಿ ನಿಮ್ಮ ಕಾರ್ಪೊರೇಟ್ ಮಿತ್ರರನ್ನೂ ವಂಚಿಸಿ ಜನರಿಗೆ ಅನುಕೂಲ ಮಾಡಿಕೊಡಿ' ಎಂದು ಎಂದು ಮಾಜಿ ಸಚಿವ ಡಾ ಎಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ

ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಗ್ಗಿಸಿರುವುದಕ್ಕೆ ಪ್ರಧಾನಿ ಮೋದಿ, ‘ನಮಗೆ ಯಾವಾಗಲೂ ಜನರು ಮೊದಲು' ಎಂದು ಹೇಳಿದ್ದಾರೆ. ಹಾಗಿದ್ದರೆ ಇಷ್ಟು ದಿನ ತೈಲ ದರ ವಿಪರೀತ ಏರಿಕೆಯಾಗಿತ್ತಲ್ಲ, ಆಗ ಇವರಿಗೆ ಜನಸಾಮಾನ್ಯರ ನೆನಪು ಆಗಲಿಲ್ಲವೇ? ನಮಗೆ ಜನರು ಮೊದಲು ಎಂಬ ಮಾತು ಆಗ ಎಲ್ಲಿ ಹೋಗಿತ್ತು?' ಎಂದು ಪ್ರಶ್ನಿಸಿದ್ದಾರೆ.

‘ಅಷ್ಟಕ್ಕೂ 115 ರೂ.ವರೆಗೆ ಪೆಟ್ರೋಲ್ ದರವನ್ನು ಏರಿಕೆ ಮಾಡಿ 9 ರೂ.ಇಳಿಸಿದರೂ ಜನರ ಜೀವನವು ಅದೇ ಸಂಕಷ್ಟದಲ್ಲಿ ಇರುವಂತಹ ಈ ಸಂದರ್ಭದಲ್ಲಿ ಏನೋ ಮಹಾ ಜವಾಬ್ದಾರಿತನದಿಂದ ಆಡಳಿತ ನಡೆಸುತ್ತಿರುವಂತೆ ಪ್ರಧಾನಿ ಮಾತನಾಡುವುದು ಹಾಸ್ಯಾಸ್ಪದ ಸಂಗತಿ. ಇನ್ನೂ ನೂರು ರೂಪಾಯಿಗಿಂತಲೂ ಮೇಲೆಯೇ ಇರುವ ತೈಲ ದರವನ್ನು 75 ರೂ.ಗೆ ಇಳಿಸಿದರೆ ಆಗ ಪ್ರಧಾನಿ ಮಾತಿಗೆ ಅರ್ಥ ಬರುತ್ತದೆ' ಎಂದು ಅವರು ಲೇವಡಿ ಮಾಡಿದ್ದಾರೆ.

‘ಇನ್ನೊಂದೆಡೆ ತೈಲ ದರ ಕಡಿಮೆ ಮಾಡಿದ, ಮೋದಿ ಸಂವೇದನೆಯುಳ್ಳ ನಾಯಕ ಎಂದು ಅಮಿತ್ ಶಾ ಹೇಳಿದ್ದು ತಮಗೆ ಮೆದುಳು ಮತ್ತು ಬುದ್ದಿ ಇದೆ ಎಂಬ ಸಂಗತಿಯನ್ನು ಮರೆತು ಮಾತನಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಕಡಿಮೆಯೇ ಇರುವಾಗ ತೈಲ ಬೆಲೆಯನ್ನು ವಿಪರೀತವಾಗಿ ಹೆಚ್ಚು ಮಾಡಿರುವ ಬಿಜೆಪಿ ಸರಕಾರ ಲೂಟಿಯಲ್ಲಿ ಮುಳುಗಿದೆ. ಅಡುಗೆ ಎಣ್ಣೆಯಿಂದ ಹಿಡಿದು ದಿನ ಬಳಕೆ ವಸ್ತುಗಳವರೆಗೆ ಜನ ಸಾಮಾನ್ಯರು ಕಣ್ಣು ಬಾಯಿ ಬಿಡುವಂತಾಗಿದೆ. ಓರ್ವ ಸಂವೇದನಾಶೀಲ ನಾಯಕನು ಇಂತಹ ದುರಾಡಳಿತಕ್ಕೆ ಕಾರಣವಾಗಬಲ್ಲನೇ?' ಎಂದು ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

‘ತೈಲ ಬೆಲೆ ಏರಿಕೆಯ ವಿಷಯದಲ್ಲಿ ಬಿಜೆಪಿಗರು ಬಹಳ ಚಾಲಾಕಿ ತನ ತೋರುತ್ತಿದ್ದಾರೆ. ಹೇಗೆಂದರೆ ತೈಲ ಬೆಲೆಯನ್ನು ವಿಪರೀತ ಅಂದರೆ 115 ರೂ.ವರೆಗೆ ಏರಿಸುವುದು, ನಂತರದಲ್ಲಿ ಕೆಲ ಕಾಲ ಜನರನ್ನು ದೋಚಿ, ಕಾರ್ಪೊರೇಟ್‍ಗಳ ಖಜಾನೆ ತುಂಬಿಸಿ ಅವರನ್ನು ಸಂತುಷ್ಟಗೊಳಿಸಿ ನಂತರವಷ್ಟೇ ಜನರನ್ನು ದಾರಿ ತಪ್ಪಿಸಲು ಬೆಲೆ ಇಳಿಕೆಯ ನಾಟಕ ಆಡುತ್ತಾರೆ. ಅದರಲ್ಲೂ ಯಾವುದಾದರೂ ಚುನಾವಣೆಗಳು ಬಂದರೆ ಇವರ ನಾಟಕಗಳು ಇನ್ನೂ ಜಾಸ್ತಿ. ಎಲ್ಲಕ್ಕಿಂತ ತಮಾಷೆ ಎಂದರೆ ‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಪರಿಸ್ಥಿತಿ, ಇನ್ನೂ ಕೆಟ್ಟದಾಗಿ, ಇರುತ್ತಿತ್ತು, ಆದರೆ ಮೋದಿ 200 ರೂ.ಆಗಬೇಕಿದ್ದ ಪೆಟ್ರೋಲ್ ದರವನ್ನು ಕಡಿಮೆಗೊಳಿಸಲು ಹಗಲಿರುಳೂ ಹೋರಾಡುತ್ತಿದ್ದಾರೆ, ಎಂಬ ಉಪಯೋಗಕ್ಕೆ ಬಾರದ ಕಸವನ್ನು ತಮ್ಮ ವಾಟ್ಸಪ್ ಯೂನಿವರ್ಸಿಟಿಗಳ ಮೂಲಕ ಹರಡುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

‘ಈಗಾಗಲೇ ನಾನು ಗಮನಿಸಿದಂತೆ ಯುವ ಪೀಳಿಗೆಯು ಪುಸ್ತಕಗಳಿಂದ ದೂರ ಸರಿಯುತ್ತಿದ್ದು, ಸುಳ್ಳು ಸುದ್ದಿಗಳಿಗೆ ಚಿಜಜiಛಿಣ ಆಗುತ್ತಿದೆ. ಜ್ಞಾನ ಸಮಾಜದ ವಾತಾವರಣ ಕ್ರಮೇಣ, ಅಜ್ಞಾನ, ಮೌಢ್ಯತೆಯಿಂದ replace ಆಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜ್ಞಾನ ಮಾರ್ಗ ಹಿಡಿಯಬೇಕಾದ ಒತ್ತಡ ಮತ್ತು ಅನಿವಾರ್ಯತೆ ಈ ದಿನ ಹೆಚ್ಚಾಗಿದೆ. ಆಗ ಮಾತ್ರ ಈ ಮೋದಿ ಮತ್ತು ಬಿಜೆಪಿಯ ಮೂರನೇ ದರ್ಜೆಯ ಸುಳ್ಳುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ' ಎಂದು ಮಹದೇವಪ್ಪ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News