ಗುತ್ತಿಗೆ ಸೇವಾವಧಿಗೂ ಗ್ರ್ಯಾಚುಟಿ: ಹೈಕೋರ್ಟ್

Update: 2022-05-22 14:34 GMT

ಬೆಂಗಳೂರು, ಮೇ 22: ನೌಕರರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯೂ ಗ್ರ್ಯಾಚುಟಿ ಪಡೆಯಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್ ಆದೇಶ ನೀಡಿದೆ.

ದಿನಗೂಲಿ ನೌಕರರ ಪ್ರಕರಣದಲ್ಲಿ ನಿಯಂತ್ರಣ/ ಮೇಲ್ಮನವಿ ಪ್ರಾಧಿಕಾರ ಆದೇಶ ರದ್ದುಗೊಳಿಸುವಂತೆ ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಹೊರಡಿಸಿದೆ.

ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುತ್ತಿದ್ದವರಿಗೆ ತಮ್ಮ ಸೇವೆ ಖಾಯಂ ಆಗುವವರೆಗಿನ ಅವಧಿ ಕೆಲಸಕ್ಕೂ ಗ್ರ್ಯಾಚುಟಿ ಪಡೆಯಲು ಅರ್ಹರು ಎಂದೂ ಆದೇಶ ನೀಡಲಾಗಿದೆ.

ಅಲ್ಲದೆ, ಗ್ರ್ಯಾಚುಟಿ ಪಾವತಿ ಕಾಯಿದೆ 1972ರ ಅನ್ವಯ ಸಕ್ಷಮ ಪ್ರಾಧಿಕಾರ, ಗ್ರ್ಯಾಚುಟಿ ಪಾವತಿಸುವಂತೆ ಮಾಡಿದ್ದ ಆದೇಶವನ್ನು ರದ್ದುಗೊಳಿಸಲು ನ್ಯಾಯಪೀಠ ನಿರಾಕರಿಸಿದೆ. ಹಲವು ಮಂದಿ ಮಾಜಿ ಉದ್ಯೋಗಿಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಯಲ್ಲಿ ಸರಕಾರಕ್ಕೆ ಯಾವುದೇ ಪರಿಹಾರ ನೀಡಲು ನಿರಾಕರಿಸಿರುವ ನ್ಯಾಯಪೀಠ, ಸರಕಾರ ಪ್ರತಿವಾದಿಗಳ ಸೇವೆ ಖಾಯಂಗೊಳಿಸಿರುವ ಕುರಿತು ಯಾವುದೇ ತಕರಾರು ತೆಗೆದಿಲ್ಲ. ಜೊತೆಗೆ ನಿಯಮದಂತೆ ಆ ನೌಕರರರು ಗ್ರ್ಯಾಚುಟಿ ಪಾವತಿಗೆ ಅರ್ಹರು ಎಂದು ಹೇಳಿದೆ.

ನ್ಯಾಯಾಲಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ಉದ್ಯೋಗಿಗಳು ಸೇವೆ ಕಾಯಂ ಆಗುವ ಮುನ್ನ ಸಲ್ಲಿಸಿದ್ದ ಸೇವೆಯ ಅವಧಿಗೂ ಗ್ರ್ಯಾಚುಟಿ ನೀಡಲೇಬೇಕಾಗುತ್ತದೆ ಎಂದು ಆದೇಶಿಸಿದೆ.

ಕರ್ನಾಟಕ ನಾಗರಿಕ ಸೇವಾ ಕಾಯಿದೆ(ಕೆಸಿಎಸ್‍ಆರ್) ಪ್ರಾಧಿಕಾರ ಪ್ರತಿವಾದಿ ಉದ್ಯೋಗಿಗಳ ಸೇವೆಯನ್ನು ಕಾಯಂಗೊಳಿಸಲಾಗಿದೆ, ಅವರು ನಿವೃತ್ತರಾಗಿ ಪಿಂಚಣಿ ಮತ್ತು ಗ್ರ್ಯಾಚುಟಿಯನ್ನು ಪಡೆದಿದ್ದಾರೆ. ಆದರೆ ಉದ್ಯೋಗಿಗಳಿಗೆ ಸೇವೆ ಕಾಯಂ ಆದ ನಂತರದ ಅವಧಿಗೆ ಮಾತ್ರ ಗ್ರ್ಯಾಚುಟಿ ಪಾವತಿಸಲಾಗಿದೆ. ಉದ್ಯೋಗಿಗಳು ದಿನಗೂಲಿ ನೌಕರರಾಗಿದ್ದ ಸಮಯವನ್ನು ಗ್ರ್ಯಾಚುಟಿಗೆ ಪರಿಗಣಿಸಿಲ್ಲ. ಅದನ್ನು ಒಪ್ಪಲಾಗದು" ಎಂದು ನ್ಯಾಯಪೀಠ ಹೇಳಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News