ತೈಲ ಬೆಲೆ ಇಳಿಕೆ: ಭಾರತವನ್ನು ಮತ್ತೆ ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

Update: 2022-05-22 17:04 GMT

ಇಸ್ಲಮಾಬಾದ್, ಮೇ 21: ಕ್ವಾಡ್ ನ ಭಾಗವಾಗಿದ್ದರೂ ಭಾರತವು ಅಮೆರಿಕದ ಒತ್ತಡವನ್ನು ಸಹಿಸಿಕೊಂಡು ಜನಸಾಮಾನ್ಯರಿಗೆ ನಿರಾಳತೆ ಒದಗಿಸಲು ರಶ್ಯದಿಂದ ರಿಯಾಯಿತಿ ದರದ ತೈಲ ಖರೀದಿಸಿತು. ಸ್ವತಂತ್ರ ವಿದೇಶಾಂಗ ನೀತಿ ಹೊಂದಿರುವುದರಿಂದ ಭಾರತಕ್ಕೆ ಇದು ಸಾಧ್ಯವಾಯಿತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
 

ತಮ್ಮ ಸರಕಾರವೂ ಇದೇ ರೀತಿಯ ವಿದೇಶಾಂಗ ನೀತಿಯನ್ನು ಸಾಧಿಸಲು ಪ್ರಯತ್ನಿಸಿತ್ತು ಎಂದು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಇದರ ಜತೆ ದಕ್ಷಿಣ ಏಶ್ಯಾ ಇಂಡೆಕ್ಸ್ ವರದಿಯನ್ನು ಟ್ಯಾಗ್ ಮಾಡಿದ್ದಾರೆ. ರಶ್ಯದಿಂದ ರಿಯಾಯಿತಿ ದರದ ತೈಲ ಖರೀದಿಸಿದ ಬಲಿಕ ಭಾರತ ಸರಕಾರ ಪೆಟ್ರೋಲ್ ದರದಲ್ಲಿ ಲೀಟರ್ಗೆ 9.5 ರೂ. ಮತ್ತು ಡೀಸೆಲ್ ದರದಲ್ಲಿ 7 ರೂ. ಇಳಿಕೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ವಿಶ್ವದಲ್ಲಿ ಅತೀ ಹೆಚ್ಚು ತೈಲ ಬಳಕೆ ಮಾಡುವ ಮತ್ತು ಆಮದು ಮಾಡಿಕೊಳ್ಳುವ ದೇಶಗಳಲ್ಲಿ 3ನೇ ಸ್ಥಾನದಲ್ಲಿರುವ ಭಾರತ, ರಶ್ಯ ರಿಯಾಯಿತಿ ದರದಲ್ಲಿ ಒದಗಿಸುವ ತೈಲವನ್ನು ಖರೀದಿಸುವ ಮೂಲಕ ಗಗನಕ್ಕೇರಿದ್ದ ತೈಲ ದರವನ್ನು ತುಸು ಇಳಿಸಲು ಯಶಸ್ವಿಯಾಗಿದೆ.

ಪಾಕಿಸ್ತಾನದ ಹಿತಾಸಕ್ತಿಗೆ ಅತ್ಯುನ್ನತ ಆದ್ಯತೆಯಿದೆ. ಆದರೆ ದುರದೃಷ್ಟವಶಾತ್ ಸ್ಥಳೀಯ ಮೀರ್ ಜಾಫರ್ ಗಳು ಮತ್ತು ಮೀರ್ ಸಾದಿಕ್‌ಗಳು ಬಾಹ್ಯ ಒತ್ತಡಕ್ಕೆ ತಲೆಬಾಗಿ ಆಡಳಿತ ಬದಲಾವಣೆಗೆ ಒತ್ತಾಯಿಸಿದರು. ಈಗ ಅರ್ಥವ್ಯವಸ್ಥೆ ಗಿರಕಿ ಹೊಡೆಯುತ್ತಿರುವಾಗ ರುಂಡವಿಲ್ಲದ ಕೋಳಿಯಂತೆ ದಿಕ್ಕೆಟ್ಟು ಓಡುತ್ತಿದ್ದಾರೆ’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.ಇಮ್ರಾನ್ ಖಾನ್ ಭಾರತವನ್ನು ಶ್ಲಾಘಿಸಿರುವುದು ಇದು ಮೊದಲ ಬಾರಿಯೇನಲ್ಲ. ಕಳೆದ ತಿಂಗಳು, ಪಾಕಿಸ್ತಾನದ ಪ್ರಧಾನಿಯಾಗಿದ್ದ ತಮ್ಮ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಸಂದರ್ಭ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದ ಇಮ್ರಾನ್, ಭಾರತವು ಮಹಾನ್ ಗೌರವದ ಪ್ರಜ್ಞೆ ಹೊಂದಿರುವ ದೇಶ ಎಂದಿದ್ದರು. ಮತ್ತೊಮ್ಮೆ, ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುವುದಕ್ಕೆ ಭಾರತವನ್ನು ಶ್ಲಾಘಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News