ಪೆಟ್ರೋಲ್-ಡೀಸೆಲ್ ಬೆಲೆ | ಮೊದಲಿದ್ದ ಅಬಕಾರಿ ಸುಂಕಕ್ಕೆ ಸಮನಾಗಿ ತೆರಿಗೆ ಕಡಿತ ಮಾಡಿ: ಸಿದ್ದರಾಮಯ್ಯ

Update: 2022-05-22 17:50 GMT

ಬೆಂಗಳೂರು, ಮೇ 22: ‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಒಂದರಲ್ಲೇ ಎಂಟು ವರ್ಷಗಳಲ್ಲಿ ಕೇಂದ್ರ ಸರಕಾರ 23 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. ಕೊರೊನ ಸೋಂಕಿನ ಆರ್ಭಟದ ನಂತರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನ ಸಾಮಾನ್ಯರಿಗೆ ಈ ತೆರಿಗೆ ಕಡಿತ ಕೊಂಚ ನಿರಾಳತೆ ಉಂಟುಮಾಡಿದೆ, ಪೂರ್ಣ ಪ್ರಮಾಣದ್ದಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ರವಿವಾರ ಟ್ವೀಟ್ ಮಾಡಿರುವ ಅವರು, ‘ಯುಪಿಎ ಸರಕಾರದ ಕೊನೆ ಅವಧಿಯಲ್ಲಿ (2014ರ ಆರಂಭದಲ್ಲಿ) ಡೀಸೆಲ್ ಮೇಲೆ 3.45 ರೂ.ಹಾಗೂ ಪೆಟ್ರೋಲ್ ಮೇಲೆ 9.20 ರೂ.ಅಬಕಾರಿ ಸುಂಕ ಇತ್ತು, ಮೋದಿಯವರು ಪ್ರಧಾನಿಯಾದ ಮೇಲೆ ಡೀಸೆಲ್ ಮೇಲೆ 31.84 ರೂ.ಹಾಗೂ ಪೆಟ್ರೋಲ್ ಮೇಲೆ 32.98 ರೂ.ತೆರಿಗೆ ಏರಿಸಲಾಗಿತ್ತು' ಎಂದು ಅಂಕಿಸಂಖ್ಯೆಗಳನ್ನು ನೀಡಿದ್ದಾರೆ.

‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆಯ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ಮೋದಿ ಅವರು ಪ್ರಧಾನಿಯಾಗುವ ಮೊದಲಿದ್ದ ಅಬಕಾರಿ ಸುಂಕಕ್ಕೆ ಸಮನಾಗಿ ತೆರಿಗೆ ಕಡಿತ ಮಾಡಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ' ಎಂದು ಸಿದ್ದರಾಮಯ್ಯ ಇದೇ ವೇಳೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News