ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಈತನನ್ನು ಕಿತ್ತುಹಾಕಿ: ರೋಹಿತ್ ಚಕ್ರತೀರ್ಥ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

Update: 2022-05-23 08:04 GMT

ಬೆಂಗಳೂರು: ಫೇಸ್ ಬುಕ್ ನಲ್ಲಿ ನಾಡಗೀತೆಗೆ ಹಾಗೂ ಕುವೆಂಪು ಅವರಿಗೆ ಅಗೌರವ ತೋರಿದ್ದಾರೆಂದು ಆರೋಪಿಸಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರೋಹಿತ್ ಚಕ್ರತೀರ್ಥರನ್ನು ಸಮಿತಿಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ನಡೆಗೂ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದಾರೆ.

''ನಾಡಗೀತೆಯನ್ನು ಅವಹೇಳನ‌ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು'' ಎಂದು ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರೋಹಿತ್ ಚಕ್ರತೀರ್ಥ  ಅವರು 2017 ರಲ್ಲಿ   ಕುವೆಂಪು ರಚಿತ ನಾಡಗೀತೆಯನ್ನು ವ್ಯಂಗ್ಯ ಮಾಡಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್  ಈಗ ವೈರಲ್ ಆಗುತ್ತಿದ್ದು,  ಇದರ ವಿರುದ್ಧ ಪೋಲೀಸ್ ಠಾಣೆಯಲ್ಲಿ ಅಂದು ದೂರು ಕೂಡ ದಾಖಲಾಗಿತ್ತು. ಇದೀಗ ಈ ಸಂಬಂಧ ಸಿದ್ದರಾಮಯ್ಯ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಚಕ್ರತೀರ್ಥ ವಿರುದ್ಧ ಕಿಡಿಗಾರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News