ಚಿಕ್ಕಮಗಳೂರು | ಜಾತಿ ನಿಂದನೆ ಆರೋಪ: ನಗರಸಭೆ ಅಧ್ಯಕ್ಷ, ಪೌರಾಯುಕ್ತರ ಬಂಧನಕ್ಕೆ ಆಗ್ರಹಿಸಿ ಧರಣಿ

Update: 2022-05-23 14:55 GMT

ಚಿಕ್ಕಮಗಳೂರು, ಮೇ 23: ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಪೌರಾಯುಕ್ತರು ನಗರಸಭೆ ಸದಸ್ಯರೊಬ್ಬರ ಜಾತಿ ನಿಂದನೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸುವಲ್ಲಿ  ಪೊಲೀಸ್ ಇಲಾಖೆ ವಿಫಲವಾಗಿದೆ. ಕೂಡಲೇ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರನ್ನು ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಸೋಮವಾರ ನಗರದಲ್ಲಿ ಧರಣಿ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಮುಖಂಡರು ಮತ್ತು ಕಾರ್ಯಕರ್ತರು ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ, ನಗರಸಭೆ ಸಾರ್ವಜನಿಕರ ಕೆಲಸಗಳಿಗೆ ಮುಕ್ತ ಅವಕಾಶ ನೀಡಬೇಕು. ನಗರಸಭೆಯಲ್ಲಿ ದಲ್ಲಾಳಿಗಳು ಯಾರು ಎನ್ನುವುದು ಈಗಾಗಲೇ ಅಧಿಕಾರಿಗಳಿಗೆ ತಿಳಿದಿದ್ದು, ಅವರ ಹೆಸರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘಟನೆಗಳ ಮಹಾ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, 13ನೇ ವಾರ್ಡ್ ನಗರಸಭೆ ಸದಸ್ಯ ಗೋಪಿ ಅವರು ಸಾರ್ವಜನಿಕ ಕೆಲಸಕ್ಕಾಗಿ ನಗರಸಭೆಗೆ ಭೇಟಿ ನೀಡಿದಾಗ, ಭದ್ರತಾ ಸಿಬ್ಬಂದಿ ಅವರನ್ನು ತಡೆಯುವ ಮೂಲಕ ಜನಪ್ರತಿನಿಧಿಗೆ ಅಪಮಾನಿಸಿದ್ದಾರೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಆಯುಕ್ತ ಬಿ.ಸಿ.ಬಸವರಾಜ್ ಅವರು ಗೋಪಿಯವರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖ ಲಾಗಿ ಮೂರು ದಿನಗಳಾಗಿವೆ. ಈವರೆಗೆ ಆರೋಪಿಗಳನ್ನು ಬಂದಿಸಿಲ್ಲ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಘಟಕದ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಆಯುಕ್ತ ಬಿ.ಸಿ.ಬಸವರಾಜ್ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಧರಣಿಯಲ್ಲಿ ಒಕ್ಕೂಟದ ಮುಖಂಡರಾದ ಕೂದುವಳ್ಳಿ ಮಂಜುನಾಥ್, ಹಣಸೇಮಕ್ಕಿ ಲಕ್ಷ್ಮಣ್, ಚಿದಂಬರ್, ಗಂಗಾಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News