ಬುದ್ಧಿಜೀವಿಗಳಿಂದ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2022-05-23 15:43 GMT

ಬೆಂಗಳೂರು, ಮೇ 23: ರಾಜ್ಯದಲ್ಲಿರುವ ಸ್ವಯಂ ಘೋಷಿತ ಬುದ್ಧಿಜೀವಿಗಳಿಂದ ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಮಕ್ಕಳ ತಲೆಯೊಳಗೆ ಹಿಂದೂ-ಮುಸ್ಲಿಂ ವಿಚಾರವನ್ನು ಪಠ್ಯದ ಮೂಲಕ ಹೇರಲು ಯತ್ನಿಸಿದ್ದು ಕಾಂಗ್ರೆಸ್. ಆದರೆ, ಈಗ ಬಿಜೆಪಿ ಸರಕಾರ ಶೈಕ್ಷಣಿಕ ಕ್ರಾಂತಿಗೆ ಮುಂದಾಗುತ್ತಿರುವುದನ್ನು ಸಹಿಸದೆ ಶಿಕ್ಷಣ ಇಲಾಖೆಯ ವಿರುದ್ಧ ನಿರಂತರವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಸೋಮವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ರಚಿಸಲಾಗಿದ್ದ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯ ಅವಧಿಯಲ್ಲಿ ಮೈಸೂರು ಒಡೆಯರ್‍ಗಳಿಗೆ ಸಂಬಂಧಿಸಿದ ಪಠ್ಯ ಕಡಿತ ಮಾಡಲಾಯಿತು. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ವಿಚಾರಗಳನ್ನು ಕೈಬಿಡಲಾಗಿದೆ. ಅಲ್ಲದೆ, ಸ್ವಾಮಿ ವಿವೇಕಾನಂದರನ್ನು ಧರ್ಮ ವಿರೋಧಿ ಎಂಬ ರೀತಿಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಯಾರೊಬ್ಬರೂ ಪ್ರಶ್ನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತಿಹಾಸದ ಪಾಠಗಳು ಮಕ್ಕಳ ಅಭ್ಯಾಸಕ್ಕೆ ಹೊರೆಯಾಗಿ ಪರಿಣಮಿಸಿವೆ. ಇದನ್ನು ಸ್ವತಃ ಪಾಠ ಬೋಧಿಸುವ ಶಿಕ್ಷಕರೆ ರಾಜ್ಯ ಸರಕಾರದ ಗಮನಕ್ಕೆ ತಂದಿದ್ದರು. ಆದುದರಿಂದ, ಇತಿಹಾಸದ ಪಾಠಗಳನ್ನು ಕಡಿತ ಮಾಡಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮೊದಲ ವರದಿ ಬರುವ ಮುಂಚೆಯೇ ಟಿಪ್ಪು ಪಠ್ಯ ತೆಗೆದು ಹಾಕಿದ್ದಾರೆ ಎಂದು ಆರೋಪಿಸಿದರು. ಪಠ್ಯಪುಸ್ತಕಗಳು ಮುದ್ರಣಕ್ಕೆ ಹೋದಾಗ ಭಗತ್ ಸಿಂಗ್ ಪಾಠ ಬಿಟ್ಟಿದ್ದಾರೆ ಎಂದು ದೂರಿದರು. ಆನಂತರ, ಬಸವಣ್ಣ, ನಾರಾಯಣಗುರು ವಿಷಯ ಬಂತು. ಇವತ್ತು ಕುವೆಂಪು ಅವರನ್ನು ಅವಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಅವರು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳು, ಜನರಿಗೆ ಗೊಂದಲ ತರುವ ಕೆಲಸ ಮಾಡಲಾಗುತ್ತಿದೆ. ಜಾತಿ ಮಧ್ಯೆ ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ಸಮಿತಿ ಅನೇಕ ಪಠ್ಯಗಳನ್ನು ಕೈ ಬಿಟ್ಟಿದೆ. ಅದರ ಬಗ್ಗೆ ಯಾಕೆ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಕುವೆಂಪು ಅವರ ಬಗ್ಗೆ ಒಂದು ಪದವನ್ನು ನಾವು ಬದಲಾಯಿಸಿಲ್ಲ. ಈ ಹಿಂದೆ ಆ ಪಠ್ಯ ಹೇಗಿತ್ತೋ ಅದೇ ರೀತಿ ಮುಂದುವರಿಸಿದ್ದೇವೆ ಎಂದು ನಾಗೇಶ್ ತಿಳಿಸಿದರು.

ಬ್ರಿಟಿಷರ ವಿರುದ್ಧ ಕೇವಲ ಟಿಪ್ಪು ಮಾತ್ರ ಹೋರಾಡಿದ್ದಾ? ಬೇರೆಯವರು ಯಾರೂ ಹೋರಾಟ ಮಾಡಲಿಲ್ಲವೇ? ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಇವರೆಲ್ಲ ಯಾರ ವಿರುದ್ಧ ಹೋರಾಟ ಮಾಡಿದ್ದು? ಎಂದು ಪ್ರಶ್ನಿಸಿದ ಅವರು, ಈವರೆಗೆ ಈ ಸಂಗತಿಗಳು ಶಾಲಾ ಪಠ್ಯದಲ್ಲಿ ಇರಲಿಲ್ಲ. ಹಿಂದೂ ಮಹಾಸಾಗರ ಎಂದು ಹೇಳಲು ಇವರಿಗೆ ಮನಸ್ಸಿಲ್ಲ. ಅದನ್ನು ‘ಇಂಡಿಯನ್ ಓಷನ್’ ಎಂದು ಕರೆದಿದ್ದಾರೆ. ಕೆಂಪೇಗೌಡರನ್ನು ಉಲ್ಲೇಖಿಸಿದೆ ಬೆಂಗಳೂರಿನ ಇತಿಹಾಸ ಹೇಳಲು ಸಾಧ್ಯವೇ? ಬ್ರಿಟಿಷರನ್ನು ವೈಭವೀಕರಿಸಲು ಕೆಂಪೇಗೌಡರ ಪಠ್ಯವನ್ನೆ ಕೈಬಿಡಲಾಯಿತು. ಅದರ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ ಎಂದು ಕಿಡಿಗಾರಿದರು.

ನಾರಾಯಣಗುರು, ಭಗತ್ ಸಿಂಗ್, ರಾಜದೇವ್, ಸುಖದೇವ್ ಅವರ ಪಠ್ಯವನ್ನೂ ನಾವು ಅಳವಡಿಸಿದ್ದೇವೆ. ಈವರೆಗೆ ಕ್ರಾಂತಿಕಾರಿಗಳನ್ನು ಉಗ್ರಗಾಮಿಗಳು ಎನ್ನುತ್ತಿದ್ದರು. ಕಾಂಗ್ರೆಸ್ ಪಕ್ಷ ಮಾತ್ರ ಸ್ವಾತಂತ್ರ್ಯ ತಂದುಕೊಟ್ಟಿತು ಎಂದು ಹೇಳುತ್ತಿದ್ದರು. ಈಗಲಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕ್ರಾಂತಿಕಾರಿಗಳ ಬಗ್ಗೆ ವಿರೋಧ ಪಕ್ಷದವರು ಮಾತನಾಡಲು ಆರಂಭಿಸಿದ್ದಾರಲ್ಲ ಅದೇ ಸಂತೋಷ ಎಂದು ನಾಗೇಶ್ ಹೇಳಿದರು.

ಹೆಡ್ಗೇವಾರ್ ಅವರ ಭಾಷಣದಲ್ಲಿ ದೇಶದ್ರೋಹಿ ಅಂಶಗಳಿವೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷದವರು, ಯಾವ ಅಂಶ ಎಂಬುದನ್ನು ತಿಳಿಸಲಿ. ಆಗಿನ ಕಾಲಕ್ಕೆ ವೈದ್ಯರಾಗಿದ್ದ ಹೆಡ್ಗೇವಾರ್ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಇದೇ ವೇಳೆ ಪೆರಿಯಾರ್ ಅವರ ಪಾಠವನ್ನು ಕೈ ಬಿಟ್ಟಿರುವುದಾಗಿ ತಿಳಿಸಿದರು. ಈ ದೇಶಕ್ಕೆ ರಾಮ ಆದರ್ಶವಾಗಬೇಕೆ ಹೊರತು ರಾವಣ ಅಲ್ಲ. ರಾಮನ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದವರ ಬಗ್ಗೆ ನಾವು ಮಕ್ಕಳಿಗೆ ಪಾಠ ಹೇಳಿಕೊಡಬೇಕಾ ಎಂದು ಪ್ರಶ್ನಿಸಿದರು.

ಇತಿಹಾಸದ ಪಠ್ಯದಲ್ಲಿ ಮೊಗಲರ ಆಡಳಿತದ ಬಗ್ಗೆ ಮಾತ್ರ ಹೇಳಲಾಗಿದೆ. ಅವರು ನಡೆಸಿರುವ ಆಕ್ರಮಣಗಳ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ನಾವು ಮೊಗಲರ, ಬ್ರಿಟಿಷರ ವಿರುದ್ಧ ಹೋರಾಡಿದಂತಹ ನಾಯಕರ ಪಠ್ಯಗಳನ್ನು ಅಳವಡಿಸಿದ್ದೇವೆ. ಕಾಶ್ಮೀರದ ಮಹಾರಾಜ, ಅಸ್ಸಾಂ ಹಾಗೂ ತಮಿಳುನಾಡಿನ ರಾಜರ ಪಠ್ಯಗಳು ಇದರಲ್ಲಿವೆ ಎಂದು ಅವರು ತಿಳಿಸಿದರು. 

ಪಿಯುಸಿ ಪಠ್ಯ ಪರಿಷ್ಕರಣೆ: ಶಾಲೆಯ ಪಠ್ಯಪುಸ್ತಕಗಳ ಪರಿಷ್ಕರಣೆಯ ಜವಾಬ್ದಾರಿಯನ್ನು ಹೊತ್ತಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ಪಿಯುಸಿ ಪಠ್ಯ ಪರಿಷ್ಕರಣೆಯ ಜವಾಬ್ದಾರಿಯನ್ನು ನೀಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಗತ್ಯವಿದ್ದಲ್ಲಿ ಖಂಡಿತವಾಗಿಯೂ ನೀಡುತ್ತೇವೆ ಎಂದು ನಾಗೇಶ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News