VIDEO- ರೋಹಿತ್ ಚಕ್ರತೀರ್ಥ ಐಐಟಿ-ಸಿಇಟಿ ಪ್ರೊಫೆಸರ್: ಸಚಿವ ಬಿ.ಸಿ ನಾಗೇಶ್

Update: 2022-05-23 17:04 GMT

ಬೆಂಗಳೂರು: 'ರೋಹಿತ್ ಚಕ್ರತೀರ್ಥ ಐಐಟಿ-ಸಿಇಟಿ ಪ್ರೊಫೆಸರ್' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. 

ರೋಹಿತ್ ಚಕ್ರತೀರ್ಥ ಯಾರು? ಅವರ ಅರ್ಹತೆಯೇನು? ಅವರು ಶಿಕ್ಷಣ ತಜ್ಞರಲ್ಲವಲ್ಲ ಎಂಬ ಸುದ್ದಿಗಾರರ  ಪ್ರಶ್ನೆಗೆ ಪ್ರತಿಕ್ರಿಯಿಸಿರುವ  ಸಚಿವ ಅವರು,  ''ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರ ನೇಮಿಸಿರುವ ಕುರಿತು ಹಲವರು ತುಂಬಾ ಆಸಕ್ತಿಯಿಂದ ಮಾತನಾಡುತ್ತಿದ್ದಾರೆ. ಅಲ್ಲದೆ, ಅವರು ಶಿಕ್ಷಣ ತಜ್ಞರೇ? ಎಂದು ಪ್ರಶ್ನಿಸುತ್ತಿದ್ದಾರೆ. ಶಿಕ್ಷಣ ತಜ್ಞ ಎಂಬ ಪ್ರಮಾಣಪತ್ರವನ್ನು ನೀಡುವವರು ಯಾರು?'' ಎಂದು ಪ್ರಶ್ನಿಸಿದ್ದಾರೆ. 

''ಈ ಹಿಂದೆ ಕಾಂಗ್ರೆಸ್ ಸರಕಾರ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದ ಬರಗೂರು ರಾಮಚಂದ್ರಪ್ಪ ಶಿಕ್ಷಣ ತಜ್ಞರೇ? ಟೀಕೆಗಳನ್ನು ಮಾಡುತ್ತಿರುವವರಿಗೆ ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆ ಗೊತ್ತಿಲ್ಲ. ಅವರೊಬ್ಬ ಐಐಟಿ-ಸಿಇಟಿ ಪ್ರೊಫೆಸರ್. ಅವರ ಹಿನ್ನೆಲೆ ಏನು ಎಂಬುದನ್ನು ತಿಳಿಯದೆ ಹೇಳಿಕೆಗಳನ್ನು ನೀಡಬಾರದು'' ಎಂದು ಹೇಳಿದ್ದಾರೆ. 

ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ?: ಸಚಿವರಿಗೆ ಕಾಂಗ್ರೆಸ್ ಪ್ರಶ್ನೆ 

''ಶಿಕ್ಷಣ ಸಚಿವರೇ, ಪಠ್ಯ ಪುಸ್ತಕ ಸಮಿತಿಯ ಪೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದೀರಿ. ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿಯ ರೀತಿ ಅದೂ ನಿಮ್ಮ ಪ್ರೊಪೆಗಂಡಾ ಯುನಿವರ್ಸಿಟಿಯೇ? ಸ್ಪಷ್ಟಪಡಿಸಿ! ಇಲ್ಲದಲ್ಲಿ ಶಿಕ್ಷಣ ಇಲಾಖೆ ಶತಮೂರ್ಖರ ಕೈಯ್ಯಲ್ಲಿದೆ ಎಂದು ಒಪ್ಪಿಕೊಳ್ಳಿ'' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News