ಖಾತೆ ಜಪ್ತಿ: ಹೈಕೋರ್ಟ್‍ಗೆ ವರದಿ ಸಲ್ಲಿಸಿದ ಶಿಯೊಮಿ ಕಂಪೆನಿ

Update: 2022-05-23 16:20 GMT

ಬೆಂಗಳೂರು, ಮೇ 23: ಶಿಯೊಮಿ ಇಂಡಿಯಾ ಕಂಪೆನಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ(ಈ.ಡಿ)ವು ನೀಡಿದ್ದ ಆದೇಶವನ್ನು ಆಕ್ಷೇಪಿಸಿ ಶಿಯೊಮಿಯು ಹೈಕೋರ್ಟ್‍ಗೆ ಪ್ರತ್ಯುತ್ತರದ ವರದಿಯನ್ನು ಸಲ್ಲಿಸಿದೆ. 

ಈ ಕುರಿತು ಬೆಂಗಳೂರಿನ ಮಾರತಹಳ್ಳಿಯ ಟೆಕ್ ಗ್ರಾಮದಲ್ಲಿರುವ ಶಿಯೊಮಿ ಕಂಪೆನಿ ಕಚೇರಿಯ ಪ್ರತಿನಿಧಿ ಸಮೀರ್ ಬಿ.ಎಸ್.ರಾವ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. 

ಈ.ಡಿ ಪರ ವಕೀಲರು, ಶಿಯೊಮಿ ಕೋರ್ಟ್‍ಗೆ ಪ್ರತ್ಯುತ್ತರದ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಪರಿಶೀಲಿಸಲು ಕಾಲಾವಕಾಶ ನೀಡಬೇಕೆಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ವಿಚಾರಣೆಯನ್ನು ಜೂ.1ಕ್ಕೆ ಮುಂದೂಡಿತು. 

ಪ್ರಕರಣದ ಹಿನ್ನೆಲೆ: ಶಿಯೊಮಿ ಇಂಡಿಯಾ ಕಂಪೆನಿಯು, ಭಾರತದಲ್ಲಿ ಗಳಿಸಿದ ಹಣವನ್ನು ರಾಯಧನ ನೀಡುವ ನೆಪದಲ್ಲಿ ವಿದೇಶಿ ಕಂಪೆನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದೆ. ಹೀಗಾಗಿ, ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999ರ ನಿಯಮಗಳ ಉಲ್ಲಂಘನೆ ಎಂಬುದು ಈ.ಡಿ ಆರೋಪ.

ಈ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಈ.ಡಿ ಕಚೇರಿಯ ಸಹಾಯಕ ನಿರ್ದೇಶಕ ಎನ್.ಸೋಮಶೇಖರ್, ಶಿಯೊಮಿ ಕಂಪೆನಿಯು ಬೆಂಗಳೂರು ನಗರದಲ್ಲಿನ ಸಿಟಿ ಬ್ಯಾಂಕ್, ಐಡಿಬಿಐ ಬ್ಯಾಂಕ್, ಡ್ಯೂಷ್ ಬ್ಯಾಂಕ್, ಎಚ್‍ಎಸ್‍ಬಿಸಿ ಬ್ಯಾಂಕ್‍ಗಳ ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಲ್ಲಿ ಹೊಂದಿರುವ 5,551.27 ರೂ. ಬೃಹತ್ ಮೊತ್ತವನ್ನು ಜಪ್ತಿ ಮಾಡಬೇಕು ಎಂದು 2022ರ ಎಪ್ರಿಲ್ 29ರಂದು ಆದೇಶಿಸಿದ್ದರು. 

ಈಡಿ ಈ ರೀತಿಯ ಆದೇಶ ಹೊರಡಿಸಬಹುದು ಎಂಬ ಗುಮಾನಿಯಿಂದಲೇ ಎಪ್ರಿಲ್ 29ಕ್ಕೂ ಕೆಲವೇ ದಿನಗಳ ಮುನ್ನ ಸುಮಾರು ಒಂದೂವರೆ ಸಾವಿರ ಕೋಟಿಯಷ್ಟು ಮೊತ್ತದ ಹಣವನ್ನು ಶಿಯೊಮಿ ಚೀನಾದಲ್ಲಿರುವ ಸಂಸ್ಥೆಗೆ ವರ್ಗಾವಣೆ ಮಾಡಿದೆ ಎಂಬುದು ಈ.ಡಿ ಆಪಾದನೆ. ಶಿಯೊಮಿ ಮೊಬೈಲ್, ಸ್ಮಾರ್ಟ್ ಫೋನ್ ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪೆನಿ. ಇದು ಭಾರತದಲ್ಲಿ 2014ರಿಂದ ಕಾರ್ಯ ನಿರ್ವಹಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News