ಇತಿಹಾಸದ ಬಗ್ಗೆ ನಂಬಿಕೆ ಇಲ್ಲದ ಸಚಿವ ನಾಗೇಶರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ: ಬಿ.ಕೆ.ಹರಿಪ್ರಸಾದ್

Update: 2022-05-23 16:58 GMT

ಬೆಂಗಳೂರು, ಮೇ 23: ಇತಿಹಾಸದ ಬಗ್ಗೆ ನಂಬಿಕೆಯೂ ಇಲ್ಲದ, ಕನಿಷ್ಠ ಅದರ ತಿಳುವಳಿಕೆಯೂ ಇಲ್ಲದ ಶಿಕ್ಷಣ ಸಚಿವ ನಾಗೇಶ್‍ರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಕುಟುಕಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿ.ಕೆ.ಹರಿಪ್ರಸಾದ್ ಅವರು, ರಾಷ್ಟ್ರೀಯತೆ, ಸ್ವಾತಂತ್ರ್ಯ ಹೋರಾಟ, ರಾಷ್ಟ್ರಪ್ರೇಮ, ರಾಷ್ಟ್ರ ಧ್ವಜದ ಚಿಂತನೆಯ ಬಗ್ಗೆ ಸಂಪೂರ್ಣ ವಿರುದ್ಧವಾಗಿದ್ದವರಿಂದ ಪಾಠ ಹೇಳಿಸಿಕೊಳ್ಳುವ ದಾರಿದ್ರ್ಯ ನನಗೆ ಬಂದಿಲ್ಲ, ಬರುವುದು ಇಲ್ಲ. ಕೇಸರಿ ಬಿಳಿ ಹಸಿರು ಬಣ್ಣಗಳ ನಡುವೆ ಅಶೋಕ ಚಕ್ರವಿರುವ ರಾಷ್ಟ್ರಧ್ವಜ ಬಗ್ಗೆ ನಿಮ್ಮ ಸಂಘದ ಸಂಸ್ಥಾಪಕ ಹೆಡ್ಗೇವಾರ್ ತಿರಸ್ಕಾರ ಮನೋಭಾವನೆಯ ಜೊತೆಗೆ ಕನಿಷ್ಠ ಗೌರವವೂ ಇರಲಿಲ್ಲ ಎಂಬುದನ್ನ ಸಾಬೀತು ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ.  

ನಾಗೇಶ್ ಅವರೇ ನಾನು ನಿಮ್ಮ ಹಾವಿನಪುರದಲ್ಲಿ ತರಬೇತಿ ಪಡೆದವನೂ ಅಲ್ಲ, ವಾಟ್ಸಪ್ ಫಾರ್ವರ್ಡ್ ಯುನಿವರ್ಸಿಟಿಯ ವಿದ್ಯಾರ್ಥಿಯೂ ಅಲ್ಲ ಎಂದು ತೀರುಗೇಟು ನೀಡಿದ್ದಾರೆ. 

1930ರಲ್ಲಿಯೇ ತ್ರಿವರ್ಣ ಧ್ವಜವನ್ನ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯಾಗಿ ಎಲ್ಲ್ಲ ವರ್ಗದ, ಧರ್ಮದವರನ್ನ ಪ್ರತಿನಿಧಿಸುವಂತೆ ರಚಿಸಿ, ಇಡೀ ದೇಶವೇ ತ್ರಿವರ್ಣ ಧ್ವಜವನ್ನ ಒಪ್ಪಿ ಅಪ್ಪಿಕೊಂಡಾಗಿತ್ತು. ಆದರೆ 1928ರಿಂದಲೇ ಭಾಗಧ್ವಜವನ್ನ ಆರೆಸ್ಸೆಸ್ಸ್‍ನ ಅಧಿಕೃತ ನಿಶಾನೆ ಎಂದು ಹೆಡ್ಗೇವಾರ್ ಘೋಷಿಸಿದ್ದರಿಂದ, ತ್ರಿವರ್ಣ ಧ್ವಜವನ್ನ ಸಂಘಪರಿವಾರ ಒಪ್ಪಲೇ ಇಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ಹೆಡ್ಗೇವಾರರ ಸಹಚರನಾಗಿದ್ದ ಎನ್.ಹೆಚ್. ಪಾಲ್ಕರ್ ಬರೆದ "Sಚಿಜಿಜಿಡಿoಟಿ ಜಿಟಚಿg" ಪುಸ್ತಕದಲ್ಲಿ ದಾಖಲಾಗಿದೆ. ಅಷ್ಟೇ ಯಾಕೆ ಸ್ವಾಮಿ, ಸಂಗದ ಸ್ಥಾಪನೆ ಮುಖಂಡ ಗೋಳ್ವಾಲ್ಕರ್ ಬರೆದ "ಬಂಚ್ ಆಫ್ ಥಾಟ್ಸ್" ಪುಸ್ತಕದಲ್ಲಿ ರಾಷ್ಟ್ರಧ್ವಜವನ್ನ ತಿರಸ್ಕಾರ ಮಾಡಿದ್ದಾರೆ ಕಣ್ಣಿನ ಪೊರೆ ಕಳಚಿಟ್ಟು ಓದಿ ಎಂದು ಹೇಳಿದ್ದಾರೆ. 

1930 ಜ.26ರಂದು ಸ್ವಾತಂತ್ರ್ಯ ಹೋರಾಟಗಾರರು ತ್ರಿವರ್ಣ ಧ್ವಜವನ್ನ ದೇಶದೆಲ್ಲೆಡೆ ಹಾರಿಸಲು ತೀರ್ಮಾನಿಸಿದಾಗ ಈ ಹೆಡ್ಗೆವಾರ್ "ನಮ್ಮ ಎಲ್ಲಾ ಶಾಖೆಯ ಕಚೇರಿಗಳಲ್ಲಿ ಭಾಗವಾಧ್ವಜ ಹಾರಿಸಬೇಕು" ಎಂದು ಕರೆ ಕೊಟ್ಟಿದ್ದನ್ನ ಈ ದೇಶ ಮರೆತಿಲ್ಲ. ಆಗ ಹೆಡ್ಗೇವಾರ್ ಬದುಕಿದ್ದರು. ಅಲ್ಲದೆ, ಬಿಜೆಪಿಯ ಪಿತಾಮಹ ಶ್ಯಾಂ ಪ್ರಸಾದ್ ಮುಖರ್ಜಿಯವರು ಸ್ವಾತಂತ್ರ್ಯ ಭಾರತದ ನಂತರ ಪಂಡಿತ್ ಜವಹರಲಾಲ್ ನೆಹರೂ ಸರಕಾರದಲ್ಲ್ಲಿ ಮಂತ್ರಿಯಾಗಿದ್ದರೂ ಕೂಡ ಅವರ ಅಧಿಕೃತ ನಿವಾಸದ ಮೇಲೆ ಹಾರಿಸುತ್ತಿದ್ದಿದ್ದು ಭಗವಾದ್ವಜ ಹೊರತು ರಾಷ್ಟ್ರಧ್ವಜ ಅಲ್ಲ. ಅಷ್ಟಕ್ಕೂ ಆರೆಸ್ಸೆಸ್ಸ್‍ನ ಮುಖವಾಣಿ ಆರ್ಗನೈಸರ್ ಅಲ್ಲಿ ತ್ರಿವರ್ಣ ಇರುವ ಭಾರತದ ಧ್ವಜ ಅಪಶಕುನ ಎಂದು ಬರೆದಿರುವುದು ದಾಖಲೆಯಾಗಿದೆ. ಸ್ವಾತಂತ್ರ್ಯ ಬಂದು 2002ರವರೆಗೆ ರಾಷ್ಟ್ರ ಧ್ವಜವನ್ನ ಶಾಖೆಯ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಾರಿಸಲೇ ಇಲ್ಲ ಯಾಕೆ ಎಂಬುದನ್ನ ಮೊದಲು ಸ್ಪಷ್ಟಪಡಿಸಿ ಎಂದು ಕೇಳಿದ್ದಾರೆ.  

ಆರೆಸ್ಸೆಸ್ಸ್ ಹಾಗೂ ಬಿಜೆಪಿ ತಮ್ಮ ಹುಟ್ಟಿನಿಂದಲೇ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ರಾಷ್ಟ್ರೀಯತೆ, ರಾಷ್ಟ್ರಧ್ವಜದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ ಎಂಬ ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ. ಚರ್ಚೆಗೂ ಸಿದ್ಧ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News