ಪಟಾಕಿ ಸಿಡಿಸಿ ಜನರಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ

Update: 2022-05-23 17:27 GMT

ಬೆಂಗಳೂರು, ಮೇ 23: ಪ್ರತಿದಿನ ರಾತ್ರಿ 10 ಗಂಟೆಯ ನಂತರ ನಗರದಲ್ಲಿ ವಿವಿಧ ಕಾರಣಗಳಿಗಾಗಿ ಪಟಾಕಿ ಸಿಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಐಪಿಎಲ್ ಪಂದ್ಯಗಳ ಫಲಿತಾಂಶಗಳೂ ಕಾರಣವಿರಬಹುದು. ಕೆಲವು ಬಾರಿ ಮಧ್ಯರಾತ್ರಿಯ ಸಮಯದಲ್ಲಿ ‘ಹುಟ್ಟಿದ ಹಬ್ಬ’ ಆಚರಿಸುವ ನೆಪದಲ್ಲಿ ಪಟಾಕಿ ಸಿಡಿಸುತ್ತಿರುವ ಮಾಹಿತಿಯೂ ತಿಳಿದು ಬಂದಿದೆ. ಇದಕ್ಕೆ ಯಾವುದೆ ರೀತಿಯಲ್ಲಿ ಆಸ್ಪದ ಕೊಡಬಾರದು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಈ ರೀತಿ ಪಟಾಕಿ ಹೊಡೆಯುವುದರಿಂದ ಎಳೆ ಮಕ್ಕಳಿಗೆ, ವಯೋವೃದ್ಧರಿಗೆ, ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಾತ್ರಿಯ ಹೊತ್ತಿನಲ್ಲಿ ತೀವ್ರ ತೊಂದರೆಯುಂಟಾಗುತ್ತದೆ. ಅಲ್ಲದೆ, ಪಶು ಪಕ್ಷಿಗಳಿಗೂ ಸಹ ಈ ಕರ್ಕಶ ಶಬ್ದವು ಆಘಾತ ಉಂಟು ಮಾಡಿ ಅವುಗಳ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ಆದುದರಿಂದ, ಇಂತಹ ಘಟನೆಗಳಿಗೆ ಆಸ್ಪದ ನೀಡದಂತೆ ಹಾಗೂ ಈ ರೀತಿಯ ಘಟನೆಗಳು ಪತ್ತೆಯಾದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ತಮ್ಮ ವಲಯದ ಎಲ್ಲ ಹೊಯ್ಸಳ ಸಿಬ್ಬಂದಿ ಮತ್ತು ಬೀಟ್ ಕರ್ತವ್ಯದಲ್ಲಿ ತೊಡಗಿರುವ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸುರೇಶ್ ಕುಮಾರ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News