ವಿಧಾನಪರಿಷತ್ ಚುನಾವಣೆಗೆ ತಪ್ಪಿದ ಟಿಕೆಟ್: ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಪತ್ರ ಬರೆದ ಬಿ.ವೈ ವಿಜಯೇಂದ್ರ
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂ.3ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ನಾಲ್ವರು ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿದೆ.
ಈ ಕುರಿತು ತನ್ನ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿಕೊಂಡಿರುವ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರೂ ಆಗಿರುವ ಬಿ.ವೈ ವಿಜಯೇಂದ್ರ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ವಿಜಯೇಂದ್ರ ಅವರು ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಪತ್ರದಲ್ಲಿ ಹೀಗಿದೆ...
ಸಂಘದ ಶಿಸ್ತು, ಪಕ್ಷದ ಸಂಘಟನೆ, ಜನಪರ ಹೋರಾಟ ಹಾಗೂ ಸೇವೆಯನ್ನು ನಿಜ ಕಾಯಕವೆಂದು ತಿಳಿದು ಬದುಕಿನ ಹೆಜ್ಜೆಯಿಟ್ಟವರು ಪೂಜ್ಯ ತಂದೆ ಯಡಿಯೂರಪ್ಪನವರು, ಈ ಕಾರಣಕ್ಕಾಗಿಯೇ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣವಚನ ಸ್ವೀಕರಿಸುವ ಅವಕಾಶ ಕಲ್ಪಿಸಿದ್ದು ಜನರ ಆಶೀರ್ವಾದ ಹಾಗೂ ಭಾರತೀಯ ಜನತಾ ಪಕ್ಷ.
ಅಂತೆಯೇ ಅನಿರೀಕ್ಷಿತ ತಿರುವಿನಲ್ಲಿ ರಾಜಕೀಯ ಪ್ರವೇಶಿಸಿದ ನನಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷನಾಗಿ ಮಹತ್ವದ ಜವಾಬ್ದಾರಿ ನೀಡಿ ನನ್ನ ಬೆನ್ನುತಟ್ಟಿ ಬೆಳೆಸುತ್ತಿರುವುದು ಪಕ್ಷ ಮತ್ತು ಪಕ್ಷದ ವರಿಷ್ಠರು. ರಾಜಕೀಯ ಅಧಿಕಾರಗಳು ನಿಂತ ನೀರಲ್ಲ ಅದು ಹರಿಯುವ ನದಿಯ ಹಾಗೆ, ಇದನ್ನು ಕಾರ್ಯಕರ್ತರು ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ಅನಗತ್ಯ ಟೀಕೆ, ಟಿಪ್ಪಣಿಗಳು, ಉದ್ವೇಷಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ ಆದರಿಂದ ನನ್ನ ವ್ಯಕ್ತಿತ್ವಕ್ಕೆ ಹಾಗೂ ಪೂಜ್ಯ ತಂದೆಯವರ ಭಾವನೆಗಳಿಗೆ ಮಸಿ ಬಳಿದಂತಾಗುವುದೇ ಹೊರತು ನಮ್ಮನ್ನು ಬೆಂಬಲಿಸಿದಂತೆ ಆಗುವುದಿಲ್ಲ ಎನ್ನುವುದನ್ನು ಹಿತೈಷಿ ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ಅರಿಯಬೇಕೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.
ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು, ಸಾಮರ್ಥ್ಯ ಇರುವವರನ್ನು ಪಕ್ಷ ಎಂದಿಗೂ ಕೈ ಬಿಟ್ಟಿಲ್ಲ. ಬಿಡುವುದೂ ಇಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಹನೆ, ಸೌಜನ್ಯದಿಂದ ವರ್ತಿಸಬೇಕೆಂದು ವಿನಮ್ರತೆಯಿಂದ ಮನವಿ ಮಾಡುವೆ. ನಿಮ್ಮೆಲ್ಲರ ಬೆಂಬಲ, ಆಶೀರ್ವಾದ, ಮಾರ್ಗದರ್ಶನ, ಸಹಕಾರಗಳು ಸದಾ ಇರಲಿ ಎಂದು ಕೋರುತ್ತೇನೆ ಎಂದು ವಿಜಯೇಂದ್ರ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಕ್ಷದ ಎಲ್ಲ ಸಹ ಕಾರ್ಯಕರ್ತರಲ್ಲಿ ಮತ್ತು ಅಭಿಮಾನಿಗಳಲ್ಲಿ ನನ್ನ ಮನವಿ.@BJP4Karnataka @blsanthosh @JoshiPralhad pic.twitter.com/ZLEXuPiMkW
— Vijayendra Yeddyurappa (@BYVijayendra) May 24, 2022