ವಿಶ್ವ ಯೋಗ ದಿನದಂದು ಮೈಸೂರಿಗೆ ಪ್ರಧಾನಿ ಮೋದಿ ಆಗಮನ: ಸಚಿವ ಸೋಮಶೇಖರ್

Update: 2022-05-24 08:22 GMT

ಮೈಸೂರು: ಜೂ. 21ರ ವಿಶ್ವ ಯೋಗ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಯೋಗ ಕಾರ್ಯಕ್ರಮ ಯಶಸ್ವಿಗೊಳಿಸಲು ಸಮಿತಿ ರಚಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಎಲ್ಲಾ ಪಕ್ಷದ ಶಾಸಕರು, ಸಂಸದರು, ಯೋಗ ತರಗತಿಗಳ ಮುಖ್ಯಸ್ಥರನ್ನು ಸಮಿತಿ ಒಳಗೊಂಡಿರಲಿದೆ ಎಂದರು.

ಯೋಗ ಕಾರ್ಯಕ್ರಮದ ಸ್ಥಳ ಇನ್ನೂ ಅಂತಿಮವಾಗಿಲ್ಲ. ಮೇ 30ಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಭೇಟಿ ನೀಡಲಿದ್ದು ಅವರೊಂದಿಗೆ ಕಾರ್ಯಕ್ರಮದ ಕುರಿತು ಚರ್ಚಿಸಿ ಸ್ಥಳ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಮೊದಲ ಬಾರಿಗೆ ಪ್ರಧಾನಿ ಆಗಮಿಸುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಚನೆಯಾಗುವ ಸಮಿತಿ ಕ್ರಮವಹಿಸುತ್ತದೆ. ಈ ಕಾರ್ಯಕ್ರಮ ವಿಶ್ವದಾದ್ಯಂತ ಪ್ರಸಾರವಾಗಲಿದೆ. ಇದರಿಂದ ಸಾಂಸ್ಕೃತಿಕ ನಗರಿಯ ಖ್ಯಾತಿ ವಿಶ್ವಕ್ಕೆ ಪಸರಿಸಲಿದೆ. ಮೈಸೂರಿನ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದರು.

ಬೆಂಗಳೂರು, ಮಂಡ್ಯ ಸೇರಿದಂತೆ ನಾನಾ ಜಿಲ್ಲೆಗಳ ಯೋಗ ತರಗತಿಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕತೆ ತೋರುತ್ತಿದ್ದಾರೆ. ಸ್ಥಳ ಅಂತಿಮವಾದ ಬಳಿಕ ಎಷ್ಟು ಸಂಖ್ಯೆಯಲ್ಲಿ ಯೋಗಪಟುಗಳನ್ನು ಸೇರಿಸಬಹುದು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ರಾಮದಾಸ್, ಮೂಡಾ ಅಧ್ಯಕ್ಷರಾದ ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News